ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ವಿವಿಧ ದೇಶಗಳಿಂದ ಇಂಡಿಯನ್ ಪೋಸ್ಟ್ ಮುಖಾಂತರ ತರಿಸಿಕೊಂಡಿದ್ದ 21,17,34,000 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇದೀಗ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಸೆಪ್ಟೆಂಬರ್ 9 ರಂದು ಚಾಮರಾಜಪೇಟೆ ಬಳಿ ವಿದೇಶಿ ಪೋಸ್ಟ್ ಆಫೀಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಕಾನೂನು ಬದ್ದವಾಗಿಯೇ ಬೆಂಗಳೂರಿಗೆ ಹೈಎಂಡ್ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು. ಥಯಲ್ಯಾಂಡ್, ಅಮೆರಿಕ, ಯುಕೆಯಿಂದ ಡ್ರಗ್ಸ್ ಸಪ್ಲೈ ಆಗುತ್ತಿತ್ತು ಎನ್ನಲಾಗಿದೆ.
ಭಾರತೀಯ ಅಂಚೆ ಮೂಲಕ ವಿವಿಧ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದ ಬೆಂಗಳೂರು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಈ ವರ್ಷದಲ್ಲಿ 12 ಪ್ರಕರಣಗಳನ್ನು ದಾಖಲು ಮಾಡಿ, ಆರೋಪಿಗಳನ್ನು ದಸ್ತಗಿರಿ ಮಾಡಿ ವಿವಿಧ ರೀತಿಯ ನಿಷೇಧಿತ ಮಾಧಕ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲು ಮಾಡಿರುತ್ತಾರೆ ಎಂದಿದೆ.
ಸೆಪ್ಟೆಂಬರ್ ಮಾಹೆಯಲ್ಲಿ ನಗರದ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಇಂತಹದೇ 2 ಪ್ರಕರಣಗಳು ಮತ್ತು ಸಿಸಿಬಿ ಠಾಣೆಯಲ್ಲಿ 1 ಪ್ರಕರಣ ದಾಖಲಿಸಿದ್ದು, ಈ ಪ್ರಕರಣಗಳಲ್ಲಿ ಮೂವರು ವ್ಯಕ್ತಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದೆ.