ಬೆಂಗಳೂರು: ನಾವು ಸಂಘಟನೆಯನ್ನೂ ಕಟ್ಟುತ್ತೇವೆ. ಚುನಾವಣೆ ಗೆದ್ದು ಜನರ ಸೇವೆಯನ್ನೂ ಮಾಡುತ್ತೇವೆ. ಜಗತ್ತಿನ ಕಲ್ಯಾಣದ ಯೋಚನೆಯನ್ನೂ ಮಾಡುತ್ತೇವೆ. ಕುಕ್ಕರ್ ಬಾಂಬ್ನ ಕೊಳಕು ರಾಜಕೀಯ ನಮ್ಮದಲ್ಲ ಎಂದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ತಿಳಿಸಿದರು.
ನಗರದ ಅರಮನೆ ಮೈದಾನದ “ಗಾಯತ್ರಿ ವಿಹಾರ”ದಲ್ಲಿ ಇಂದು ರಾಜ್ಯ ಪ್ರಕೋಷ್ಠಗಳ ಸಮಾವೇಶ ‘ಶಕ್ತಿ ಸಂಗಮ’ದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಪ್ರಕೋಷ್ಠಗಳ ಮೊಟ್ಟ ಮೊದಲ ರಾಜ್ಯ ಸಮಾವೇಶ ಇದಾಗಿದೆ. ಇದಕ್ಕಾಗಿ ಪ್ರಕೋಷ್ಠಗಳ ಮುಖ್ಯಸ್ಥರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಅನೇಕ ವರ್ಗದ ಕಾರ್ಯಕರ್ತರು ವೇದಿಕೆ ಮೇಲೆ ಹಾಗೂ ವೇದಿಕೆ ಕೆಳಗಿದ್ದಾರೆ ಎಂದು ತಿಳಿಸಿದರು. ವಿವಿಧ ಪ್ರಕೋಷ್ಠಗಳ ಕಾರ್ಯಕರ್ತರನ್ನು ಪರಿಚಯ ಮಾಡಿ ಇತರ ಪ್ರಕೋಷ್ಠದವರು ಅವರಿಗೆ ಚಪ್ಪಾಳೆ ಹೊಡೆದು ಅಭಿನಂದಿಸುವಂತೆ ಮಾಡಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಯಾಕೆ ಹಾಕಬೇಕು?- ಸಿದ್ಧರಾಮಯ್ಯ ಪ್ರಶ್ನೆ
ರಾಜ್ಯಾಧ್ಯಕ್ಷರಿಂದ ಪೇಜ್ ಪ್ರಮುಖ್ ವರೆಗೆ ಎಲ್ಲ ವೃತ್ತಿಪರ ಪ್ರಕೋಷ್ಠಗಳನ್ನು ಜಾಗೃತಿಗೊಳಿಸುವ ಕಾರ್ಯ ನಡೆಯುತ್ತಿದೆ. ಇನ್ನು 100 ದಿನಗಳಲ್ಲಿ ಚುನಾವಣೆ ದಿನಾಂಕ ಪ್ರಕಟಗೊಳ್ಳಲಿದೆ. ಒಂದೇಸಾರಿ ಪಂಚರತ್ನ ಬಂದಿದೆ. ಪ್ರತಿ ಸಾರಿ ಇದು ಕೊನೆಯ ಚುನಾವಣೆ ಎಂಬ ಘೋಷಣೆ ಆಗಿದೆ. ವೇದಿಕೆಯಲ್ಲಿ ಕಣ್ಣೀರಿನ ಮೂಲಕ ಚುನಾವಣೆಗೆ ಹೋಗುತ್ತಿದ್ದಾರೆ; ಬೀದಿಗೆ ಬಂದಿದ್ದಾರೆ. ಅಪ್ಪನಿಂದ ಮಗನಿಗೆ, ತಾಯಿಯಿಂದ ಮಗನಿಗೆ ತ್ಯಾಗ ಮಾಡುತ್ತಾರೆ. ಚುನಾವಣೆ ಕಾಲ ಆರಂಭವಾಗಿದೆ ಎಂದು ತಿಳಿಸಿದರು.
ಟಿಪ್ಪು ತಾತನ ಹೆಸರು ನೆನಪಾಗುವ ಇನ್ನೊಂದು ಪಕ್ಷ ಇದೆ. ಚುನಾವಣಾ ಕಾಲ ಬಂದ ಕಾರಣ ಹೀಗೆ ಆಗುತ್ತಿದೆ. ಕೆಲವರಿಗೆ ಭಯೋತ್ಪಾದಕ ಚಟುವಟಿಕೆಯಲ್ಲೂ ಬುದ್ಧಿ ಸರಿ ಇಲ್ಲದ ಪ್ರಶ್ನೆ ಏಳುತ್ತದೆ. ಯಾಕೆಂದರೆ ಇದು ಚುನಾವಣೆ ಆರಂಭದ ಕಾಲ ಎಂದು ವಿಶ್ಲೇಷಿಸಿದರು.
ನಮ್ಮದು ಚುನಾವಣೆ ಕಾಲದ ಸಂಘಟನೆ ಅಲ್ಲ. ವರ್ಷದ 365 ದಿನಗಳ ಕಾಲವೂ ನಾವು ಸಂಘಟಿತರಾಗಿ ಇರುತ್ತೇವೆ. ನಾವು ಉತ್ತಮ ಆಡಳಿತ ನೀಡಿದ್ದೇವೆ. ಆದ್ದರಿಂದ ನಾವು ಚುನಾವಣೆಗೆ ಕಣ್ಣೀರಿಲ್ಲದೆ ನಗುತ್ತ ಸಜ್ಜಾಗಿದ್ದೇವೆ ಎಂದು ನುಡಿದರು.
BREAKING NEWS: ನಾಳೆ ಬೆಳಿಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಮಹಾಪುರಷರ ಪೋಟೋ ಅನಾವರಣ – ಸ್ಪೀಕರ್ ಕಾಗೇರಿ
ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳದಲ್ಲೂ ಇದೇ ಮಾದರಿಯ ಸಮಾವೇಶಗಳನ್ನು ಬಿಜೆಪಿ ನಡೆಸಲಿದೆ ಎಂದ ಅವರು, ಕಾರ್ಯಕರ್ತರ ಶಕ್ತಿ ಪರಿಚಯಕ್ಕಾಗಿ ಇಂದು ಶಕ್ತಿ ಸಂಗಮ ನಡೆದಿದೆ. ಪ್ರಕೋಷ್ಠದವರು ಸರಿಯಾಗಿ ಕೆಲಸ ಮಾಡಿದರೆ ಬಿಜೆಪಿ ಗೆಲುವಿನ ರಥ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಜನಸಾಮಾನ್ಯರ ಪರವಾಗಿ ಕೇಂದ್ರದ ಮೋದಿಜಿ ಸರಕಾರ ಮತ್ತು ಇಲ್ಲಿನ ಬಿಜೆಪಿ ಸರಕಾರಗಳು ಕೆಲಸ ಮಾಡಿವೆ. ಅದನ್ನು ಜನರಿಗೆ ತಿಳಿಸುವ ಕಾರ್ಯ ನಡೆಸಿ ಎಂದು ಕಿವಿಮಾತು ಹೇಳಿದರು.
ಮುಂದಿನ 4 ತಿಂಗಳು ಅಪಾರ ಶ್ರಮ ಇರಬೇಕಾದ ಕಾಲ. ನಮ್ಮ ಕೆಲಸ ಜನಸಾಮಾನ್ಯರ ಮಧ್ಯದಲ್ಲಿ ಇರಬೇಕು. ಬಿಜೆಪಿ ಗೆಲುವು ಕಾಲದ ಅವಶ್ಯಕತೆ. ಅಭಿವೃದ್ಧಿಯ ರೈಲಿಗೆ ವೇಗ ಸಿಕ್ಕಿದೆ. ಮತ್ತೆ ಬಿಜೆಪಿ ಗೆದ್ದರೆ ಅದರ ವೇಗ ಹೆಚ್ಚಾಗಲು ಸಾಧ್ಯ. ಕೆಲವೇ ವರ್ಗವನ್ನು ಓಲೈಸುವ ಪಕ್ಷಗಳ ನಾಯಕರು ರಾಜ್ಯವನ್ನು ಹಿಮ್ಮುಖವಾಗಿ ಒಯ್ಯುತ್ತಾರೆ. ಅದಾಗಬಾರದು ಎಂದು ಜನರಿಗೆ ಮನವರಿಕೆ ಮಾಡಬೇಕಿದೆ ಎಂದರು.
ದತ್ತಪೀಠದ ವಿಚಾರ ತಾರ್ಕಿಕ ಅಂತ್ಯ ಕಾಣಲು ಬಿಜೆಪಿ ಸರಕಾರ ಕಾರಣ ಎಂದು ವಿಶ್ಲೇಷಿಸಿದರು. ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಬಿಜೆಪಿ ಸರಕಾರದಿಂದ ಆಗಿದೆ. ಶಾಂತಿಯುತವಾಗಿ- ಸುವ್ಯವಸ್ಥಿತವಾಗಿ ಕೋವಿಡ್ ಲಸಿಕೆ ಲಭಿಸಲು ಮೋದಿಜಿ ಕಾರಣ. ಸರಕಾರದ ಅಭಿವೃದ್ಧಿಯ ವೇಗ ಮುಂದುವರಿಸಲು ಬಿಜೆಪಿಗೆ ಮತ ಕೊಡಬೇಕು ಎಂದು ತಿಳಿಸಿದರು. ಬಿಜೆಪಿ ರಥವನ್ನು ವಿಜಯದ ಕಡೆಗೆ ಎಳೆಯಬೇಕಿದೆ ಎಂದು ಮನವಿ ಮಾಡಿದರು.
BIG NEWS: ‘ವಿಪಕ್ಷ ನಾಯಕ ಸಿದ್ಧರಾಮಯ್ಯ’ಗೆ ‘ಬಾದಾಮಿ ಕ್ಷೇತ್ರ’ದ ಜನತೆಯಿಂದ ‘ಹೆಲಿಕಾಪ್ಟರ್’ ಗಿಫ್ಟ್?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಅಧಿಕಾರಕ್ಕಾಗಿಯೇಇರುವ ಹಲವು ಪಕ್ಷಗಳು ದೇಶದಲ್ಲಿವೆ. ಆದರೆ, ಈ ದೇಶವನ್ನು ಸದೃಢ, ಸ್ವಾಭಿಮಾನದಿಂದ ಕಟ್ಟುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಸಾಮಾಜಿಕ ಸಾಮರಸ್ಯ, ಎಲ್ಲ ವೃತ್ತಿಗಳಿಗೆ ಗೌರವ, ಅಸ್ಮಿತೆ ಕೊಡುವ, ಮೇಲುಕೀಳಿಲ್ಲದೆ ಎಲ್ಲ ವರ್ಗದವರನ್ನೂ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯಿಂದ ಪ್ರಕೋಷ್ಠಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಎಲ್ಲ ವೃತ್ತಿಯವರಿಗೆ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಬಿಜೆಪಿ ಮಾಡಿದೆ. ನಮ್ಮ ಪಕ್ಷ ವ್ಯಕ್ತಿಯಿಂದ ಆರಂಭಿಸಿ ದೇಶದ ವರೆಗೆ ಕಟ್ಟುವ ಕಾರ್ಯವನ್ನು ಮಾಡುತ್ತಿದೆ. ಬಹಳಷ್ಟು ಪಕ್ಷಗಳು ಅಧಿಕಾರದ ರಾಜಕಾರಣ ಮಾಡಿದರೆ, ಬಿಜೆಪಿ ಜನರ ಅಭಿವೃದ್ಧಿ ರಾಜಕಾರಣಕ್ಕೆ ಬದ್ಧವಾಗಿದೆ. ವಿಶ್ವಕ್ಕೇ ಮಾದರಿ ಎನಿಸುವ ಪಕ್ಷವಾಗಿ ಅದು ಹೊರಹೊಮ್ಮಿದೆ ಎಂದರು.
ದುಡ್ಡಿದ್ದವ ದೊಡ್ಡಪ್ಪ ಎಂಬ ಕಾಲ ಇತ್ತು. ಜ್ಞಾನ ಮತ್ತು ಶ್ರಮದ ಶತಮಾನವಿದು. ಬಿಜೆಪಿ ಮೋದಿಜಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದುಡಿಯುವ ವರ್ಗ ಮತ್ತು ಶ್ರಮಿಕರನ್ನು ಗುರುತಿಸಿ ಅವರಿಗೆ ತರಬೇತಿ ಕೊಟ್ಟು, ಕೌಶಲ್ಯ ವೃದ್ಧಿ ಮಾಡುತ್ತಿದೆ. ತಳಹಂತದಿಂದ ದೇಶ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ವಿವರಿಸಿದರು.
ದುಡಿಯುವ ವರ್ಗದ ಶ್ರಮದಿಂದ ದೇಶದಲ್ಲಿ ಬದಲಾವಣೆ ಆಗುತ್ತಿದೆ. ರೈತನ ಬೆವರಿನಿಂದ ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಇದನ್ನು ನಂಬಿ ಬಿಜೆಪಿ ಪ್ರಕೋಷ್ಠಗಳನ್ನು ಮಾಡಿದೆ ಎಂದರು.
ದೇಶದ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಾಗಲು ಆತ್ಮನಿರ್ಭರ- ಸ್ವಾವಲಂಬಿ ಭಾರತ ಕಟ್ಟಲು ಮುಂದಿನ 25 ವರ್ಷ ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಬೇಕಿದೆ. 2023 ರ ಅಸೆಂಬ್ಲಿ ಚುನಾವಣೆ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು, ಶಕ್ತಿ ಸಂಗಮದ ಮೂಲಕ ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಆಗಿದೆ. ಬಿಜೆಪಿ ವಿಚಾರಧಾರೆಗೆ ಯಾವತ್ತೂ ಸಾವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಓಲೈಕೆ ರಾಜಕಾರಣವಿತ್ತು. ದೇಶ ಮೊದಲು ಎಂಬ ಪರಿಕಲ್ಪನೆಗಾಗಿ ಭಾರತೀಯ ಜನಸಂಘದ ಉದಯವಾಯಿತು. ಇವತ್ತು ಪರಿವರ್ತನೆ ಆಗಿದೆ. ಬಿಜೆಪಿ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಮುಖ್ಯಮಂತ್ರಿಗಳು, ಸಂಸದರು, ಶಾಸಕರನ್ನು ಅದು ಹೊಂದಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಆಗಲಿದೆ ಎಂದು ವಿಶ್ವಾಸದಿಂದ ನುಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಆಗಲಿದೆ. ಸಿದ್ದರಾಮಣ್ಣ ನಿರುದ್ಯೋಗಿ ಆಗಲಿದ್ದಾರೆ ಎಂದು ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ, ಆಡ್ವಾಣಿ, ಯಡಿಯೂರಪ್ಪ, ಅನಂತಕುಮಾರ್ ಅವರ ಹೋರಾಟವನ್ನು ನಾವು ಸ್ಮರಿಸಬೇಕು. ಜಗತ್ತಿನಲ್ಲಿ ಸಾಂಸ್ಕøತಿಕ- ಅಭಿವೃದ್ಧಿಯ ಪರಿವರ್ತನೆ ಆಗುತ್ತಿದೆ. ಜಗತ್ತಿಗೆ ಮಾರ್ಗದರ್ಶನ ಮಾಡುವ ಹಂತಕ್ಕೆ ಭಾರತ ತಲುಪಿದೆ ಎಂದರು.
ರಾಮನ ಪಾದದ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು ಘೋಷಣೆ ಇದೀಗ ನನಸಾಗುತ್ತಿದೆ. ಜಗತ್ತಿಗೆ ಸಾಂಸ್ಕೃತಿಕ ಭಾರತದ ಪರಿಚಯ ಆಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಕುಟುಂಬವಾದ ರಾಜಕಾರಣ ಕೊಡುಗೆಯಾಗಿ ಜನರಿಗೆ ಸಿಕ್ಕಿತ್ತು ಎಂದರು.
ಭಯೋತ್ಪಾದಕರ ಸಾವಿಗೆ ಕಣ್ಣೀರು ಹಾಕುವವರು ಕಾಂಗ್ರೆಸ್ನಲ್ಲಿದ್ದಾರೆ. ಮತಾಂತರ ನಿಷೇಧ, ಗೋಹತ್ಯೆ ನಿಷೇಧವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವ ಕಾರ್ಯವನ್ನು ಮೋದಿಜಿ ಮಾಡಿದ್ದಾರೆ. ಆದರೆ, ಅಭಿವೃದ್ಧಿಗೂ ವಿರೋಧ ಮಾಡುವ ಕಾರ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು. ಭಯೋತ್ಪಾದನೆ, ಉಗ್ರವಾದಿಗಳ ಪರವಾಗಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಭಯೋತ್ಪಾದಕರ ಪಕ್ಷ. ಹಿಜಾಬ್ ವಿಚಾರದಲ್ಲಿ ಒಂದು ವರ್ಗದ ಪರ ನಿಲ್ಲುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಹಿಂದೂಗಳ ಮತ ಬೇಡ ಎಂದು ಘೋಷಿಸಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸವಾಲೆಸೆದರು. ಮತಬ್ಯಾಂಕ್ ರಾಜಕೀಯ ನಿಲ್ಲಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪ್ರಧಾನಿಗಳದು ಹಗರಣಗಳ ಕೊಡುಗೆ ಎಂದು ವಿವರಿಸಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರದು ಕಳಂಕರಹಿತ ಆಡಳಿತ. ಆದರೆ, ವಾಜಪೇಯಿ ಮತ್ತು ಮೋದಿಜಿ ಅವರು ಭ್ರಷ್ಟಾಚಾರ ಇಲ್ಲದೆ, ಕಳಂಕರಹಿತವಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು. ಸಿದ್ರಾಮಣ್ಣನ ಕಾಲದಲ್ಲಿ ಗರಿಷ್ಠ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು ಎಂದು ವಿವರಿಸಿದರು.
ಕಳೆದ ಆರು ತಿಂಗಳಲ್ಲಿ ಏಳು ಚುನಾವಣೆ ನಡೆದಿದ್ದು, ಆರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೋದಿಯವರ ಬಗ್ಗೆ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ- ಬೊಮ್ಮಾಯಿ ಅವರ ಉತ್ತಮ ಆಡಳಿತವನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಜೆಪಿ ಜನಪರ ಎಂಬುದು ಜನರಿಗೆ ತಿಳಿದಿದೆ. ಆದ್ದರಿಂದ ಬಿಜೆಪಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ದೇಶದ 73ರಷ್ಟು ಜನರು ನರೇಂದ್ರ ಮೋದಿಜಿ ಅವರ ಪರವಾಗಿದ್ದಾರೆ. ಇದರ ಪರಿಣಾಮವಾಗಿ ಕಾಂಗ್ರೆಸ್ ರಾಜ್ಯದಲ್ಲಿ ದೂಳೀಪಟ ಆಗಲಿದೆ ಎಂದು ತಿಳಿಸಿದರು.
ಚುನಾವಣೆಗೆ 4 ತಿಂಗಳಷ್ಟೇ ಉಳಿದಿದೆ. ಮುಂದಿನ ದಿನಗಳಲ್ಲಿ 140ಕ್ಕೂ ಹೆಚ್ಚು ಸ್ಥಾನ ಪಡೆಯಲು ಡಬಲ್ ಎಂಜಿನ್ ಸರಕಾರಗಳ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಆ ಮೂಲಕ ಬಿಜೆಪಿ ಗೆಲುವಿಗೆ ಸಂಕಲ್ಪ ಮಾಡಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ರಾಜ್ಯದ ಜನರ ನೆಮ್ಮದಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ತಿಳಿಸಿದರು. ಬೈಸಿಕಲ್ ವಿತರಣೆ ಸೇರಿದಂತೆ ಜನಪರ ಯೋಜನೆಗಳನ್ನು ತಿಳಿಸಿಕೊಡಿ. ದಯಮಾಡಿ ಮೈಮರೆಯಬೇಡಿ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ತಿರುಕನ ಕನಸಾಗಲಿದೆ. ಭ್ರಷ್ಟಾಚಾರಕ್ಕಾಗಿ ಟೊಂಕ ಕಟ್ಟಿ ನಿಂತ ಕಾಂಗ್ರೆಸ್ ಬಗ್ಗೆ ತಿಳಿಸಿ ಎಂದು ಮನವಿ ಮಾಡಿದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ವೃತ್ತಿ ಆಧರಿತವಾಗಿ ಜನರನ್ನು ತಲುಪುವ ಕೆಲಸವನ್ನು ಬಿಜೆಪಿ ಮಾಡಿದೆ. ಇದು ಬಿಜೆಪಿಯ ಗೆಲುವಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಗುಜರಾತ್ ಮಾದರಿ ಎಂದರೆ ಇದೇ ಆಗಿದೆ. ದುಡಿಯುವ ವರ್ಗದ ಆಧರಿತ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗುತ್ತಿದೆ. ಪ್ರಧಾನಿಯವರು ದೇಶದ ಎಲ್ಲರನ್ನು ತಮ್ಮ ಕುಟುಂಬದಂತೆ ನೋಡಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ನುಡಿದರು. ದಕ್ಷಿಣ ಭಾರತಕ್ಕೆ ಹೊಸ ದಿಕ್ಸೂಚಿ ಆಗಬಲ್ಲ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಮಾತನಾಡಿ, ಅಭಿವೃದ್ಧಿ ಮತ್ತು ಜನಪರ ಎಂಬುದನ್ನು ಕೇಂದ್ರ- ರಾಜ್ಯದ ಸರಕಾರಗಳು ಸಾಬೀತುಪಡಿಸಿವೆ. ಅದನ್ನು ಪ್ರಕೋಷ್ಠಗಳ ಕಾರ್ಯಕರ್ತರಿಗೆ ಜನರಿಗೆ ಮನವರಿಕೆ ಮಾಡಬೇಕಿದೆ ಎಂದು ತಿಳಿಸಿದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಜನಪ್ರತಿನಿಧಿಗಳು, ಸಚಿವರು, ಮಾಜಿ ಸಚಿವರು, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ಸಹ ಸಂಯೋಜಕ ಜಯತೀರ್ಥ ಕಟ್ಟಿ, ಡಾ|| ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಹೆಚ್.ಎಸ್. ಗೋಪಿನಾಥ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.