ಮಂಗಳೂರು: ನಗರದ ಆಟೋರಿಕ್ಷಾ ಸ್ಫೋಟ ಪ್ರಕರಣವನ್ನು ( Mangaluru autorickshaw blast case ) ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency -NIA) ಔಪಚಾರಿಕವಾಗಿ ನಿರ್ವಹಿಸಲಿದೆ ಎಂದು ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ( Karnataka DGP Praveen Sood ) ಬುಧವಾರ ತಿಳಿಸಿದ್ದಾರೆ.
ನವೆಂಬರ್ 19 ರಂದು ಸಂಜೆ ಪೊಲೀಸ್ ಠಾಣೆಯ ಬಳಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪ್ರಯಾಣಿಕರು ಮತ್ತು ಚಾಲಕ ಇಬ್ಬರೂ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಗಳೂರು ಆಟೋ ರಿಕ್ಷಾ ಸ್ಫೋಟಕ್ಕೆ ಪ್ರಚೋದನೆ ನೀಡಲು ಡಿಟೋನೇಟರ್, ವೈರ್ ಗಳು ಮತ್ತು ಬ್ಯಾಟರಿಗಳನ್ನು ಅಳವಡಿಸಿದ ಪ್ರೆಶರ್-ಕುಕ್ಕರ್ ಅನ್ನು ಬಳಸಲಾಗಿದೆ. ಈ ಹಿಂದೆ, ಕರ್ನಾಟಕದ ಡಿಜಿಪಿ ಈ ಸ್ಫೋಟವು ಆಕಸ್ಮಿಕವಲ್ಲ ಆದರೆ ‘ಭಯೋತ್ಪಾದಕ ಕೃತ್ಯ’ ಎಂದು ದೃಢಪಡಿಸಿದ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೂದ್ ಅವರೊಂದಿಗೆ ನಗರದ ಹೊರವಲಯದಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜ್ಞಾನೇಂದ್ರ, ಸ್ಫೋಟದ ಆರೋಪಿ ಮೊಹಮ್ಮದ್ ಶರೀಕ್ ತಮಿಳುನಾಡಿನ ಕೊಯಮತ್ತೂರು ಮತ್ತು ಕನ್ಯಾಕುಮಾರಿಯಂತಹ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾನೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದರು. ತನಿಖೆಯ ಭಾಗವಾಗಿ ವಿವಿಧ ಪೊಲೀಸ್ ತಂಡಗಳನ್ನು ರಚಿಸಿ ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ.
ಸ್ಫೋಟದ ಮೊದಲ ದಿನದಿಂದ ಎನ್ಐಎ ಮತ್ತು ಕೇಂದ್ರ ಏಜೆನ್ಸಿಗಳು ತನಿಖೆಯ ಭಾಗವಾಗಿವೆ ಎಂದು ಹಾಜರಿದ್ದ ಸೂದ್ ಹೇಳಿದರು. ಈ ಪ್ರಕರಣವನ್ನು ಶೀಘ್ರದಲ್ಲೇ ಔಪಚಾರಿಕವಾಗಿ ಎನ್ಐಎಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.