ಶಿವಮೊಗ್ಗ : ವಿಶ್ವ ಹೃದಯ ದಿನದ ಅಂಗವಾಗಿ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇಲ್ಲಿಂದ ಏರ್ಪಡಿಸಾಗಿದ್ದ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ಸಿಡಿ ಘಟಕ, ಐಎಂಎ ಮತ್ತು ಜಿಲ್ಲಾ ಸೈಕಲ್ ಕ್ಲಬ್ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಸೈಕಲ್ ಜಾಥಾದಲ್ಲಿ ಅವರು ಪಾಲ್ಗೊಂಡು ಮಾತನಾಡಿ, ಹೃದ್ರೋಗದ ಕುರಿತು ಎಲ್ಲರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ತುಂಬಾ ಅಗತ್ಯವಿದೆ. ಇತ್ತೀಚಿಗೆ ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೃದ್ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಉತ್ತಮ ಜೀವನಶೈಲಿ, ಆರೋಗ್ಯದ ಅರಿವು ಸೇರಿದಂತೆ ಇದನ್ನು ತಡೆಯುವ ಎಲ್ಲ ರೀತಿಯ ಕ್ರಮ ವಹಿಸುವ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಎಲ್ಲರೂ ಸಹಕರಿಸಬೇಕು ಹಾಗೂ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು.
ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ ಹೃದ್ರೋಗ ಮತ್ತು ಪಾಶ್ರ್ವವಾಯು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ‘ವಿಶ್ವ ಹೃದಯ’ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ‘ಹೃದಯಕ್ಕಾಗಿ ಹೃದಯ ಬಳಸಿ’ ಎಂಬ ಘೋಷಣೆಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದ್ದು ಹೃದ್ರೋಗ ಮತ್ತು ಪಾಶ್ರ್ವವಾಯು ರೋಗಗಳಿಗೆ ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಅಭ್ಯಾಸಗಳು, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ.
ಡಬ್ಲ್ಯುಹೆಚ್ಓ ವರದಿ ಪ್ರಕಾರ ಅಸಾಂಕ್ರಾಮಿಕ ರೋಗಗಳಿಂದ ಸೇ.68 ಜನ ಮರಣ ಹೊಂದುತ್ತಿದ್ದಾರೆ. ಅದರಲ್ಲೂ ಹೃದ್ರೋಗ, ಕ್ಯಾನ್ಸರ್, ಮಧುಮೇಹ ಪ್ರಮುಖ ಕಾರಣವಾಗಿದೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಉಪಕೇಂದ್ರ-ಪ್ರಾಥಮಿಕ ಆರೋಗ್ಯ ಕೇಂದ್ರ-ಸಮುದಾಯ ಆರೋಗ್ಯ , ಕೇಂದ್ರ, ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಶೇ.25 ರಿಂದ 30 ರಷ್ಟು ಜನರು ಹೃದ್ರೋಗದಿಂದ ಸಾವನ್ನಪ್ಪುತ್ತಿದ್ದು ನಂ.1 ಮಾರಣಾಂತಿಕ ಕಾಯಿಲೆಯಾಗಿದೆ. ದೈಹಿಕ ಮತ್ತು ಮಾನಸಿಕ ಒತ್ತಡ ಜೀವನಶೈಲಿ, ಚಟುವಟಿಕೆ ರಹಿತ ಜೀವನ, ಬೊಜ್ಜು, ಮಾದಕ ವ್ಯಸನ ಸೇರಿದಂತೆ ಅನೇಕ ಕಾರಣಗಳಿಂದ ಹೃದ್ರೋಗ ಸೇರಿದಂತೆ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವುದು ಅತಿ ಅಗತ್ಯವಾಗಿದ್ದು, ಜನರು ತಂಬಾಕು ಸೇರಿದಂತೆ ಮಾದಕ ವ್ಯಸನದಿಂದ ದೂರ ಇರಬೇಕು, ಶಿಸ್ತುಬದ್ದ ಜೀವನ ಶೈಲಿ ರೂಢಿಸಿಕೊಳ್ಳಬೆಕು, ದೈಹಿಕ ಚಟುವಟಿಕೆಗಳಾದ ನಡಿಗೆ, ಯೋಗ ಇತ್ಯಾದಿ ವ್ಯಾಯಾಮಗಳನ್ನು ನಿಯಮಬದ್ದವಾಗಿ ಮಾಡಬೇಕು. ಆರೋಗ್ಯಕರ ಆಹಾರ ಪದ್ದತಿ, ಸೊಪ್ಪು ತರಕಾರಿ, ಋತುಮಾನಕ್ಕೆ ತಕ್ಕಂತಹ ಹಣ್ಣು-ತರಕಾರಿ ಬಳಸಬೇಕು. ಹಾಗೂ ಆರೋಗ್ಯವಾಗಿದ್ದರೂ ಸಹ ವರ್ಷಕ್ಕೆರಡು ಬಾರಿ ಆರೋಗ್ಯ ತಪಾಸಣೆ ಮಾಡಿಸಬೇಕು. ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಪಡೆದು ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಡಿಟಿಓ ಡಾ.ದಿನೇಶ್, ಐಎಂಎ ಅಧ್ಯಕ್ಷ ಡಾ.ಅರುಣ್, ಶಿವಮೊಗ್ಗ sಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಭಾರಧ್ವಾಜ್, ಕ್ಲಬ್ ಸದಸ್ಯರು, ಇತರರು ಪಾಲ್ಗೊಂಡಿದ್ದರು.