ಬೆಳಗಾವಿ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುರಿತು ಹಗುರವಾಗಿ ಮಾತನಾಡಿದ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪ ಕುರಿತು ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡು ಎಂಬ ಹೇಳಿಕೆಗೆ ಗೋಕಾಕ ಸಾಹುಕಾರ ತಿರುಗೇಟು ನೀಡಿದ್ದು, ನಿಮ್ಮ ಅಪ್ಪನನ್ನು ಮುಖ್ಯಮಂತ್ರಿ ಮಾಡಲು ನಾನು ಬಿಜೆಪಿಗೆ ಬಂದಿದ್ದು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ಹೇಳಿಕೆ ವಿಚಾರವಾಗಿ, ವಿಜಯೇಂದ್ರ ನೀನು ಇನ್ನೂ ಬಚ್ಚಾ ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ಇಂದಿಗೂ ಯಡಿಯೂರಪ್ಪ ವಿರುದ್ಧ ಅಗೌರವದಿಂದ ನಾನು ಮಾತನಾಡಿಲ್ಲ. ಇಂದಿಗೂ ನನಗೆ ಬಿಎಸ್ ಯಡಿಯೂರಪ್ಪ ಅವರ ಮೇಲೆ ಗೌರವ ಇದೆ.ಆದರೆ ನೀನು ಸುಳ್ಳು ಹೇಳುವುದು ಬಿಡು ಎಂದು ವಾಗ್ದಾಳಿ ನಡೆಸಿದರು.
ನಾನು ವಿಜಯೇಂದ್ರ ಮನೆಯಿಂದಲೇ ಪ್ರವಾಸ ಶುರು ಮಾಡುತ್ತೇನೆ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನೇ ದಿನಾಂಕ ನಿಗದಿ ಮಾಡು. ಬೆಂಬಲಿಗರು ಬರಲ್ಲ, ಗನ್ ಮ್ಯಾನ್ ಬರಲ್ಲ, ನಾನೊಬ್ಬನೇ ಬರುತ್ತೇನೆ. ನಿಮ್ಮ ಅಪ್ಪನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾನು 17 ಜನ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬಂದಿದ್ದು ಎಂದು ಬಿ ವೈ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.