ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾಲದಲ್ಲಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಅಲ್ಲದೇ ಹೊಸ ನಿಬಂಧನೆಗಳ ಹೆಸರಿನಲ್ಲಿ ರಾಜ್ಯದ ಹಲವು ಫಲಾನುಭವಿ ರೈತರನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ರಾಜ್ಯದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಸಹಾಯಧನವನ್ನು ಬಿಡುಗಡೆ ಮಾಡುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಹಾಗೂ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರು ದೇಶದಲ್ಲಿರುವ ಸಣ್ಣ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ 2018ರಲ್ಲಿ ಪಿಎಮ್-ಕಿಸಾನ್ ಯೋಜನೆಯನ್ನು ಜಾರಿಗೊಳಿಸಿದರು. ಸದರಿ ಯೋಜನೆಯಲ್ಲಿ ದೇಶದ ಸುಮಾರು ಹತ್ತು ಕೋಟಿ ರೈತರಿಗೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಾರ್ಷಿಕ 6 ಸಾವಿರ ರೂಪಾಯಿಗಳ ಸಹಾಯಧನವನ್ನು ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದರು. ರಾಜ್ಯ ಬಿಜೆಪಿ ಸರ್ಕಾರ ಈ ಯೋಜನೆಗೆ ಪೂರಕವಾಗಿ ರಾಜ್ಯದಲ್ಲಿ ಸಣ್ಣ ರೈತರಿಗೆ ವಾರ್ಷಿಕ 4 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿತು. ಇದರ ಅನ್ವಯ ರಾಜ್ಯದ ಸಣ್ಣ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ಸಹಾಯಧನ ದೊರೆಯಬೇಕಾಗಿದೆ ಎಂದಿದ್ದಾರೆ.
ಮಾಲ್ ನಲ್ಲಿ ಸಿನಿಮಾ ಪ್ರಮೋಷನ್ ವೇಳೆ ಇಬ್ಬರು ಮಲಯಾಳಂ ನಟಿರ ಮೇಲೆ ಲೈಂಗಿಕ ದೌರ್ಜನ್ಯ
ಸದರಿ ಯೋಜನೆಯನ್ನು ಭಾರತೀಯ ಜನತಾ ಪಕ್ಷ ಅವಶ್ಯಕತೆಗಿಂತ ಹೆಚ್ಚು ಡಂಗೂರ ಸಾರಿ ಪ್ರಚಾರವನ್ನು ಪಡೆದುಕೊಂಡಿತು. ರೈತರು ನೇರವಾಗಿ ಈ ಯೋಜನೆಗೆ ಸಂಪರ್ಕ ಪಡೆದು ಸಹಾಯಧನ ಪಡೆದುಕೊಳ್ಳಬಹುದೆಂದು ಪ್ರಚಾರ ಮಾಡಿತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಿಎಮ್-ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಹೊಸದಾಗಿ ನಿಭಂದನೆಗಳನ್ನು ವಿಧಿಸುವುದರ ಮೂಲಕ ಬಹುತೇಕ ರೈತರು ಯೋಜನೆಯಿಂದ ವಂಚಿತರಾಗಲು ಮುನ್ನುಡಿ ಬರೆದಿರುತ್ತದೆ. ಹೊಸ ನಿಭಂದನೆಗಳ ಅನ್ವಯ ಸಣ್ಣ ರೈತರೂ ಯೋಜನೆಯ ಲಾಭ ಪಡೆಯದಂತೆ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ ರೈತರು, ಮಾಸಿಕ 10 ಸಾವಿರ ರೂಪಾಯಿಗಳಿಗಿನ್ನ ಹೆಚ್ಚು ಪಿಂಚಣಿ ಪಡೆಯುತ್ತಿರುವವರು, ಸಾಂಸ್ಥಿಕ ಜಮೀನು ಹೊಂದಿರುವವರು, ವೃತ್ತಿಪರರಾದ ವಕೀಲರು, ವೈದ್ಯರು, ಇಂಜಿನಿಯರ್ಗಳು ಮುಂತಾದವರು, ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ಇದರ ಲಾಭವನ್ನು ಪಡೆಯದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ. ರೈತರಿಗೆ ಸಹಾಯಧನ ದೊರೆಯದಂತೆ ಮಾಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಿ ನಿಭಂದನೆಗಳನ್ನು ಪರಿಶೀಲಿಸಿದ ನಂತರವೇ ಹಣವನ್ನು ಖಾತೆಗೆ ವರ್ಗಾಯಿಸಲು ಸೂಚಿಸಲಾಗಿದೆ. ಈ ತಿಂಗಳ 30ರೊಳಗೆ ಕೇಂದ್ರ ಸರ್ಕಾರ ಈ ಯೋಜನೆಯಡಿಯಲ್ಲಿ ಮತ್ತೊಂದು ಕಂತು ಹಣವನ್ನು ಬಿಡುಗಡೆ ಮಾಡಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾಲದಲ್ಲಿ ರೈತರಿಗೆ ಪಿಎಮ್-ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಹೊಸ ನಿಭಂದನೆಗಳ ಹೆಸರಿನಲ್ಲಿ ರಾಜ್ಯದ ಒಟ್ಟಾರೆ ರೈತ ಫಲಾನುಭವಿಗಳಲ್ಲಿ ಅರ್ದದಷ್ಟು ಫಲಾನುಭವಿಗಳನ್ನು ತೆಗೆದುಹಾಕಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೆ ಸಣ್ಣ ರೈತರು ನೇರವಾಗಿ ಪಿಎಮ್-ಕಿಸಾನ್ ಯೋಜನೆಗೆ ತಮ್ಮ ವಿವರಗಳನ್ನು ಅಪ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು, ಆದರೆ ನೇರವಾಗಿ ವಿವರಗಳನ್ನು ಅಪ್ಲೋಡ್ ಮಾಡಿ ಯೋಜನೆಯ ಪ್ರಯೋಜನ ಪಡೆದಿದ್ದ ಸುಮಾರು 1,06,416 ರೈತರ ವಿವರಗಳನ್ನು ಅಮಾನ್ಯಗೊಳಿಸಿ ಅವರಿಂದ ಸುಮರು 39.44 ಕೋಟಿ ರೂಪಾಯಿಗಳನ್ನು ಮರುವಸೂಲಿ ಮಾಡಲು ಮುಂದಾಗಿರುತ್ತದೆ. ರಾಜ್ಯ ಸರ್ಕಾರದ ಈ ನಡೆ ರೈತರನ್ನು ಸೌಲಭ್ಯಗಳಿಂದ ವಂಚಿಸುವ ದುರುದ್ದೇಶದಿಂದ ಕೂಡಿದ್ದು, ಕುಂಟು ನೆಪಗಳನ್ನು ಒಡ್ಡಿ ರಾಜ್ಯದ ರೈತರನ್ನು ಅವಕಾಶ ವಂಚಿತರನ್ನಾಗಿ ಮಾಡುವ ಪ್ರಯತ್ನವಾಗಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ರೈತ ಧಮನಕಾರಿಯ ಇಂತಹ ಪ್ರಯತ್ನಗಳನ್ನು ಕೈಬಿಟ್ಟು, ರೈತ ಹಿತಾಸಕ್ತಿಗೆ ವಿರುದ್ಧವಾದ ನಿಯಮಗಳನ್ನು ಸಡಿಲಗೊಳಿಸಿ ರಾಜ್ಯದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಎಮ್-ಕಿಸಾನ್ ಯೋಜನೆಯ ಸಹಾಯಧನವನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.