ಬೆಂಗಳೂರು: ಬಸವರಾಜ್ ಬೊಮ್ಮಾಯಿ ( Basavaraj Bommai ) ರಾಜ್ಯದ ಘನತೆ, ಗೌರವ ಮಣ್ಣುಪಾಲು ಮಾಡಿದ್ದಾರೆ. ಜೆಎಚ್ ಪಟೇಲ್, ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಎಲ್ಲರೂ ಬೆಂಗಳೂರನ್ನು ಅಂತರಾಷ್ಟ್ರೀಯ ನಗರವನ್ನಾಗಿ ಮಾಡುತ್ತೇವೆ ಎಂದಿದ್ದರು. ಆದರೆ ಬೊಮ್ಮಾಯಿ ಯುಪಿ ಮಾಡೆಲ್ ಎನ್ನುತ್ತಾರೆ ಎಂಬುದಾಗಿ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ( B K Hariprasad ) ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಉತ್ತರ ಪ್ರದೇಶ ಎಂದರೆ ಉಲ್ಟಾ ಪ್ರದೇಶ ಎಂದು ಗೊತ್ತಾದಂಗಿಲ್ಲ. ಯುಪಿ ಕಟ್ಟಕಡೆಯ ಸ್ಥಾನದಲ್ಲಿದೆ. ಯಾವುದೇ ರೀತಿಯ ಸ್ವಾಭಿಮಾನ ಇಲ್ಲದ ಸಿಎಂ ಬಸವರಾಜ ಬೊಮ್ಮಾಯಿ. 1984ರಲ್ಲಿ ಪಂಚಾಯತ್ ರಾಜ್ ಮಸೂದೆಯಲ್ಲಿ ತಿದ್ದುಪಡಿ ತಂದು ಅವಧಿ ಮುಗಿದ ಬಳಿಕ ಆರು ತಿಂಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕು ಎಂದಿದೆ. ಆದರೆ ಎರಡು ವರ್ಷವಾದರೂ ಚುನಾವಣೆ ನಡೆದಿಲ್ಲ ಎಂದರು.
ಬೆಂಗಳೂರು ನಗರದಲ್ಲಿ ಎಲ್ಲ ಕಡೆ ಗುಂಡಿ ಬಿದ್ದಿದೆ. ಕೊಲೆಗಳಿಂದ ಜಾಸ್ತಿ ಗುಂಡಿಗೆ ಬಿದ್ದು ಜನ ಸಾಯುತ್ತಿದ್ದಾರೆ. ಬಸವರಾಜ ಬೊಮ್ಮಾಯಿಗೆ 40% ನೇರವಾಗಿ ಹೋಗುತ್ತಿದೆ. ಬೆಂಗಳೂರು ನಗರವನ್ನು ಭ್ರಷ್ಟಾಚಾರ ನಗರವನ್ನಾಗಿ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಹೂಹಾರ ಹಾಕಿ ಸ್ವಾಗತ ಮಾಡ್ತಾರೆ ಎಂದು ಹೇಳಿದರು.