ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರೇ, ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು, ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ? ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಇಂದಿನ ವಾರ್ತಾ ಇಲಾಖೆಯಿಂದ ನೀಡಿದಂತ ಜಾಹೀರಾತಿಗೆ ತೀವ್ರ ಕಿಡಿಕಾರಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಪಂಡಿತ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ಆರ್ ಎಸ್ ಎಸ್ ಕೋಮುರಾಜಕಾರಣವನ್ನು ವಿರೋಧಿಸಿದ್ದ, ಗಾಂಧಿ ಹತ್ಯೆಯ ನಂತರ ಅದನ್ನು ನಿಷೇದಿಸಿದ್ದ ಮತ್ತು ತನ್ನ ಬದುಕನ್ನು ಜಾತ್ಯತೀತತೆ ಕಾಪಾಡಲು ಮುಡಿಪಾಗಿಟ್ಟಿದ್ದ ಜವಾಹರಲಾಲ್ ನೆಹರೂ ಅವರ ಬಗ್ಗೆ ಆರ್ ಎಸ್ ಎಸ್ ಅಲರ್ಜಿಯನ್ನು ಅರ್ಥಮಾಡಿಕೊಳ್ಳಬಹುದು, ನಿಮಗೇನಾಗಿದೆ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನಮೂದಿಸಲು ನಿಮಗೆ ಸಿಕ್ಕ ಏಕೈಕ ವ್ಯಕ್ತಿ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕ್ಷಮೆ ಯಾಚಿಸಿದ್ದ ಹೇಡಿ ವಿ.ಡಿ.ಸಾವರ್ಕರ್ ಮಾತ್ರ ಎನ್ನುವುದು ನಿಮ್ಮ ಪರಿವಾರದ ಸ್ವಾತಂತ್ರ್ಯ ಹೋರಾಟದ ಸತ್ಯವನ್ನು ಬೆತ್ತಲೆ ಮಾಡಿದೆ. ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿ ಎರಡು ಬಾರಿ (1921 ಮತ್ತು 1931) ಜೈಲುಶಿಕ್ಷೆ ಅನುಭವಿಸಿದ್ದ ಆರ್ ಎಸ್ ಎಸ್ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಚಿತ್ರವನ್ನು ಯಾಕೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ ಬೊಮ್ಮಾಯಿಯವರೇ? ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದ್ದ ಅವರ ಬಂಡವಾಳ ಬಯಲಾಗಬಹುದೆಂಬ ಭಯವೇ? ಎಂದಿದ್ದಾರೆ.
ಬ್ರಿಟಿಷರ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಗೊಂಡ ವಿ.ಡಿ.ಸಾವರ್ಕರ್ ಅವರಿಗೆ ಮೊದಲ ಸಾಲಿನ ಗೌರವ, ಸ್ವಾತಂತ್ರ್ಯ ಹೋರಾಟದ ಜೊತೆ ಬಹುಜನ ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿಯೂ ಹೋರಾಟ ನಡೆಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊನೆಯ ಸಾಲಿನ ನಿರ್ಲಕ್ಷ್ಯ. ಸುಪ್ತ ಅಸ್ಪೃಶ್ಯತೆಯ ನಗ್ನ ಪ್ರದರ್ಶನ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
BIGG NEWS : ಶಿವಮೊಗ್ಗದಲ್ಲಿ ಅಶಾಂತಿ ವಾತಾವರಣ ಸೃಷ್ಟಿಗೆ ಯತ್ನ : ಸಂಸದ ಬಿ.ವೈ. ರಾಘವೇಂದ್ರ
ಸನ್ಮಾನ್ಯ ಬೊಮ್ಮಾಯಿಯವರೇ, ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ ಎಂದು ಒತ್ತಾಯಿಸಿದ್ದಾರೆ.