ಪುಣೆ: ಮಹಾರಾಷ್ಟ್ರದ ಪುಣೆಯ ಗಂಗಾಧಾಮ್ ಚೌಕ್ ಪ್ರದೇಶದಲ್ಲಿರುವ ಅನಿಲ ದಾಸ್ತಾನು ಘಟಕವೊಂದರಲ್ಲಿ (Storage Facility) ದಿಢೀರ್ ಅನಿಲ ಸೋರಿಕೆ ಸಂಭವಿಸಿದ್ದು, ಕನಿಷ್ಠ 24 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಿಲ ಹರಡುತ್ತಿದ್ದಂತೆ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಉಸಿರಾಟದ ತೊಂದರೆ ಮತ್ತು ಕಣ್ಣು ಉರಿ ಕಾಣಿಸಿಕೊಂಡಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಗುರುವಾರ ಬೆಳಿಗ್ಗೆ ದಾಸ್ತಾನು ಘಟಕದ ವಾಲ್ವ್‌ವೊಂದರಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅನಿಲ ಸೋರಿಕೆಯಾಗಿದೆ. ನೋಡನೋಡುತ್ತಿದ್ದಂತೆಯೇ ಗಾಳಿಯಲ್ಲಿ ಅನಿಲ ಹರಡಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸೋರಿಕೆಯನ್ನು ತಡೆಗಟ್ಟಲು ಕಾರ್ಯಾಚರಣೆ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಅಸ್ವಸ್ಥಗೊಂಡ 24 ಜನರನ್ನು ಸಮೀಪದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲರ ಸ್ಥಿತಿ ಸದ್ಯ ಸ್ಥಿರವಾಗಿದ್ದು, ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.








