ಬೆಳಗಾವಿ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಅತಿ ದೊಡ್ಡ ಆಘಾತವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹೊರತಾಗಿಯೂ ಕೂಡ ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಪಡೆಯಲು ವಿಫಲವಾಗಿದೆ.
ಇನ್ನು ಇದೇ ವಿಚಾರವಾಗಿ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ತಪ್ಪು ಅಭ್ಯರ್ಥಿ ಆಯ್ಕೆಯೇ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯೇ ತಪ್ಪಾಗಿದೆ. ಇದೇ ಕಾರಣಕ್ಕಾಗಿ ಸೋಲು ಅನುಭವಿಸಿದೆ. ಈ ಚುನಾವಣೆಯಲ್ಲಿ ಮತದಾರರು ಅರ್ಹ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಮತದಾನ ಮಾಡುವುದು, ಅಭ್ಯರ್ಥಿ ಆಯ್ಕೆ ಅವರವರ ವೈಯಕ್ತಿಕ ವಿಚಾರ. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸರಿಯಾಗಿರಲಿಲ್ಲ. ಹಾಗಾಗಿಯೇ ಬಿಜೆಪಿ ಸೋತಿರಬಹುದು ಎಂಬುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.