ಬೆಂಗಳೂರು : ‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆ ಸಾಕಾರವಾಗಲು ಎಲ್ಲಾ ರಾಜಕೀಯ ಪಕ್ಷಗಳ ಸಹಮತ ಬೇಕು. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳ ಸಹಮತ ಪಡೆದೇ ‘ಒಂದು ದೇಶ ಒಂದು ಚುನಾವಣೆ’ ನಿರ್ಣಯ ಅಂಗೀಕರಿಸಲಾಗುವುದು ಎಂದು ಒಂದು ದೇಶ ಒಂದು ಚುನಾವಣೆ ಕುರಿತ ಸಂಸತ್ತಿನ ಜಂಟಿ ಸದನ ಸಮಿತಿ ಅಧ್ಯಕ್ಷ ಪಿ.ಪಿ.ಚೌಧರಿ ತಿಳಿಸಿದರು.
ಒಂದು ದೇಶ ಒಂದು ಚುನಾವಣೆ ಬಗ್ಗೆ ಸಂಸತ್ತಿನ ಜಂಟಿ ಸದನ ಸಮಿತಿ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿತು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿ ಸಮಿತಿ ಮುಂದೆ ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿದರು.
ಸಭೆ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ, ರಾಜಕೀಯ ಪಕ್ಷಗಳ ಸಲಹೆ ಸ್ವೀಕರಿಸಲಾಗಿದೆ. ರಾಜ್ಯದ ಮುಖಂಡರು ಉತ್ತಮ ವಿಚಾರಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರು ಬಂದಿದ್ದರು. ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದರು.
ಕೆಲ ರಾಜ್ಯಗಳಲ್ಲಿ ಏಕಕಾಲದ ಕ್ರಮವನ್ನು (one-time measure) ಅನ್ವಯಿಸಲಾಗುತ್ತದೆ. ಅಲ್ಲಿ ಚುನಾವಣೆಗಳು ಯಾವಾಗ ನಡೆದರೂ ಸರಿ, ತದನಂತರದ ಎಲ್ಲಾ ಚುನಾವಣೆಗಳನ್ನು ಪ್ರತಿಯೊಂದು ರಾಜ್ಯಕ್ಕೂ 2034 ರಲ್ಲಿ ಒಟ್ಟಿಗೆ ನಡೆಸಲಾಗುತ್ತದೆ. ಇದರರ್ಥ, ಒಂದು ರಾಜ್ಯವು 2032 ರಲ್ಲಿ ಚುನಾವಣೆ ನಡೆಸಿದರೆ, ಅದರ ಅವಧಿಯನ್ನು 2034 ಕ್ಕೆ ಕೊನೆಗೊಳ್ಳುವಂತೆ ಪರಿಣಾಮಕಾರಿಯಾಗಿ ಕಡಿತಗೊಳಿಸಲಾಗುತ್ತದೆ.
ಏಕೆಂದರೆ, synchronization ಸಾಧಿಸಲು ಇದೊಂದೇ ಮಾರ್ಗವಾಗಿದೆ. ವಾಸ್ತವವಾಗಿ, ಇದನ್ನು ಸಾಧಿಸುವುದೇ ಅತ್ಯಂತ ದೊಡ್ಡ ಸವಾಲಾಗಿದೆ. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾವು ಅಗತ್ಯವಿರುವ ಸಾಂವಿಧಾನಿಕ ತಿದ್ದುಪಡಿಗಳನ್ನು ತರಬಹುದಾಗಿದೆ ಎಂದರು.








