ಚೆನ್ನೈ/ಕೋಲ್ಕತ್ತಾ:ದೇಶದ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಿಗೆ ಇಂದು (ಏಪ್ರಿಲ್ 23) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸುತ್ತಿದ್ದಾರೆ.
ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (DMK) ಮತ್ತು ಎಡಪ್ಪಾಡಿ ಪಳನಿಸ್ವಾಮಿ (AIADMK) ನಡುವಿನ ನೇರ ಹಣಾಹಣಿಯ ಜೊತೆಗೆ, ಈ ಬಾರಿ ಸೂಪರ್ ಸ್ಟಾರ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ಚುನಾವಣಾ ಕಣವನ್ನು ರಂಗೇರಿಸಿದೆ.
ಪಶ್ಚಿಮ ಬಂಗಾಳ – ಮೊದಲ ಹಂತ: ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಬಿಜೆಪಿಯ ನಡುವೆ ಇಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಎರಡನೇ ಹಂತದ ಮತದಾನ ಏಪ್ರಿಲ್ 29ಕ್ಕೆ ನಿಗದಿಯಾಗಿದೆ.
ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್, ಉದಯನಿಧಿ ಸ್ಟಾಲಿನ್ ಹಾಗೂ ನಟ ವಿಜಯ್ ಅವರ ರಾಜಕೀಯ ಭವಿಷ್ಯ ಇಂದು ಇವಿಎಂ ಯಂತ್ರ ಸೇರಲಿದೆ. ಇತ್ತ ಬಂಗಾಳದಲ್ಲಿ ಸುವೇಂದು ಅಧಿಕಾರಿ ಸೇರಿದಂತೆ ಹಲವು ಪ್ರಮುಖ ನಾಯಕರ ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿದೆ.
ಬಿಗಿ ಭದ್ರತೆ: ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎರಡೂ ರಾಜ್ಯಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಶಸ್ತ್ರ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.








