ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತೊಮ್ಮೆ ಕಿಡಿಕಾರಿದ್ದಾರೆ. ಆರ್‌ಸಿಬಿ ಕೇವಲ ಲಾಭಕೋರ ಸಂಸ್ಥೆಯಾಗಿದೆಯೇ ಹೊರತು ಅದರಿಂದ ಯಾರಿಗೂ ನಯಾಪೈಸೆ ಪ್ರಯೋಜನವಿಲ್ಲ ಎಂದು ಅವರು ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಚೇತನ್ ಅಹಿಂಸಾ ವಾದವೇನು?
ಚೇತನ್ ಅವರ ಪ್ರಕಾರ, ಆರ್‌ಸಿಬಿ ಎನ್ನುವುದು ಕ್ರೀಡೆಯನ್ನು ಮೀರಿದ ಒಂದು ಪಕ್ಕಾ ವಾಣಿಜ್ಯ ಸಂಸ್ಥೆ. ಸಿಲಿಕಾನ್ ಸಿಟಿಯ ಹೆಸರನ್ನು ಬಂಡವಾಳ ಮಾಡಿಕೊಂಡು ಈ ಫ್ರಾಂಚೈಸಿ ಭಾರೀ ಪ್ರಮಾಣದ ಹಣ ಗಳಿಸುತ್ತಿದೆ. ಆದರೆ, ಈ ವ್ಯವಹಾರದಿಂದ ಕರ್ನಾಟಕಕ್ಕಾಗಲಿ ಅಥವಾ ಇಲ್ಲಿನ ಜನರಿಗಾಗಲಿ ಯಾವುದೇ ರೀತಿಯ ಆರ್ಥಿಕ ಅಥವಾ ಸಾಮಾಜಿಕ ಕೊಡುಗೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.
ಡಿಕೆಶಿ ಹೇಳಿಕೆಗೆ ವಿರೋಧ
ಇದೇ ವಿಷಯವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಆರ್‌ಸಿಬಿ ಪರವಾಗಿ ಆಡಿದ್ದ ಮಾತುಗಳನ್ನು ಚೇತನ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕಳೆದೆರಡು ವರ್ಷಗಳಲ್ಲಿ ನಡೆದ ಕೆಲವೊಂದು ಕಹಿ ಘಟನೆಗಳನ್ನು ನೆನಪಿಸಿರುವ ಅವರು, ಕ್ರೀಡೆಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಮಿತಿಮೀರಿದ ವ್ಯಾಪಾರೀಕರಣ ಸಮಾಜಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೇತನ್ ಅಹಿಂಸಾ ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಜಾಗದ ಕುರಿತು ಅವರು ಆಡಿದ್ದ ಮಾತುಗಳು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
RCB ಕೇವಲ ಒಂದು ಬಿಸಿನೆಸ್! 🏏
ಇದು 'ಬೆಂಗಳೂರು' ಹೆಸರನ್ನು ಬಳಸಿಕೊಳ್ಳುತ್ತಿದೆಯೇ ಹೊರತು, ಇದರಿಂದ ಕರ್ನಾಟಕಕ್ಕಾಗಲಿ ಅಥವಾ ಬೆಂಗಳೂರಿಗಾಗಲಿ ಯಾವುದೇ ಉಪಯೋಗವಿಲ್ಲ.
.
.
.#RCB #Bengaluru #Karnataka #NammaBengaluru #Cricket pic.twitter.com/PpYNum6F6f— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) June 1, 2026








