ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿಯಿರುವ ಟಿ ಬೇಗೂರು ಎಂಬಲ್ಲಿ ಸಿನಿಮೀಯ ಶೈಲಿಯಲ್ಲಿ ಜ್ಯುವೆಲ್ಲರಿ ಶಾಪ್ ಒಂದಕ್ಕೆ ನುಗ್ಗಿದ ದರೋಡೆಕೋರರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಅಪರಿಚಿತರು, ಆರಂಭದಲ್ಲಿ ಚಿನ್ನ ಕೊಳ್ಳುವ ಗ್ರಾಹಕರಂತೆ ನಟಿಸಿ ಅಂಗಡಿಯೊಳಗೆ ಪ್ರವೇಶಿಸಿದ್ದಾರೆ. ಸಿಬ್ಬಂದಿ ಇವರನ್ನು ನಂಬಿ ಮಾತನಾಡಿಸುವಷ್ಟರಲ್ಲಿ, ತಕ್ಷಣವೇ ತಮ್ಮ ಬಳಿಯಿದ್ದ ಮಾರಕಾಸ್ತ್ರ ಹಾಗೂ ಗನ್ ನಂತಹ ಆಯುಧವನ್ನು ತೋರಿಸಿ ಇಡೀ ಅಂಗಡಿಯನ್ನು ಮೌನವಾಗಿಸಿದ್ದಾರೆ. ಸಿಬ್ಬಂದಿಗೆ ಜೀವಬೆದರಿಕೆ ಹಾಕಿ ಇಡೀ ಜ್ಯುವೆಲ್ಲರಿ ಶಾಪ್ ಅನ್ನು ತಮ್ಮ ಕಂಟ್ರೋಲ್‌ಗೆ ತಗೆದುಕೊಂಡಿದ್ದಾರೆ.
ಅಂಗಡಿಯಲ್ಲಿದ್ದವರನ್ನು ಹೆದರಿಸಿದ ದುಷ್ಕರ್ಮಿಗಳು ಸುಮಾರು 30 ರಿಂದ 35 ಗ್ರಾಂ ತೂಕದ ಚಿನ್ನದ ಉಂಗುರಗಳಿದ್ದ ಇಡೀ ಟ್ರೇ ಮತ್ತು ಕೌಂಟರ್‌ನಲ್ಲಿದ್ದ ನಗದನ್ನು ದೋಚಿದ್ದಾರೆ. ದರೋಡೆ ಮಾಡಿದ ತಕ್ಷಣವೇ ತಾವೇ ತಂದಿದ್ದ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪಟ್ಟಣದ ಜನನಿಬಿಡ ಪ್ರದೇಶದಲ್ಲೇ ಈ ಕೃತ್ಯ ನಡೆದಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಭಾರೀ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜ್ಯುವೆಲ್ಲರಿ ಶಾಪ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ಖದೀಮರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.








