ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಈಗ ಸಚಿವ ಸಂಪುಟ ಕಸರತ್ತು ಜೋರಾಗಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಬುಧವಾರ ಯಾರೆಲ್ಲಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ 10 ರಿಂದ 12 ಶಾಸಕರಿಗೆ ಸಚಿವ ಸ್ಥಾನ ಸಿಗಲಿದ್ದು, ಅವರ ಅಂತಿಮ ಪಟ್ಟಿ ಮಂಗಳವಾರವೇ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ. ಇನ್ನು ಬುಧವಾರ ಸಂಜೆ 4.05ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ಆಯೋಜನೆಗೊಂಡಿದೆ.
ಸಚಿವರ ಪಟ್ಟಿಗೆ ಮುದ್ರೆ ಒತ್ತಲು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಪ್ರಮುಖ ಸಭೆ ನಡೆಯಲಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಗಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೊತೆ ಚರ್ಚಿಸಿ ಲಿಸ್ಟ್ ಫೈನಲ್ ಮಾಡಲಿದ್ದಾರೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಕೊಟ್ಟಿರುವ 12 ಜನರ ಪಟ್ಟಿಯಲ್ಲಿ 10 ಜನರಿಗೆ ಹಾಗೂ ಡಿ.ಕೆ. ಶಿವಕುಮಾರ್ ನೀಡಿದ 15 ಜನರ ಲಿಸ್ಟ್‌ನಲ್ಲಿ 12 ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯಕ್ಕೆ ಮೊದಲ ಹಂತದ ಒಡಂಬಡಿಕೆ ಮಾತ್ರ ನಡೆಯಲಿದ್ದು, ಬಾಕಿ ಉಳಿದ ಸಚಿವ ಸ್ಥಾನಗಳನ್ನು ಜೂನ್ 18ರಂದು ನಡೆಯಲಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ನಂತರ ಭರ್ತಿ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಈಗಾಗಲೇ ಸೋಮವಾರ ರಾತ್ರಿ ಖರ್ಗೆ ಮತ್ತು ವೇಣುಗೋಪಾಲ್ ಅವರು ಉಭಯ ನಾಯಕರು ನೀಡಿದ ಲಿಸ್ಟ್ ಹಿಡಿದು ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದಾರೆ.
ರೇಸ್ ನಲ್ಲಿರುವ ಪ್ರಮುಖ ನಾಯಕರು ಯಾರು?
ಈ ಬಾರಿಯ ಸಂಪುಟದಲ್ಲಿ ಹೊಸಬರು ಮತ್ತು ಹಳಬರ ಮಿಶ್ರಣ ಇರಲಿದ್ದು, ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರಕ್ಕೆ ಮನ್ನಣೆ ಸಿಗಲಿದೆ. ಸದ್ಯದ ಮಾಹಿತಿ ಪ್ರಕಾರ ಯತೀಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್ ಹಾಗೂ ಜಮೀರ್ ಅಹಮದ್ ಖಾನ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.








