ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ತಲ್ಲಣದ ತರಂಗ ಎಬ್ಬಿಸಿರುವ ‘ಆಪರೇಷನ್ ಓಟರ್ಸ್ ಲಿಸ್ಟ್’ ಕರ್ಮಕಾಂಡದಲ್ಲಿ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಡಾ.ಅಶ್ವತ್ಥನಾರಾಯಣ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ( BBMP Chief Commissioner Tushar Girinath ) ಅವರಿಗೆ ಸಂಕಷ್ಟ ಎದುರಾಗಿದೆ. ಈ ವರೆಗೂ ಕಾಂಗ್ರೆಸ್- ಬಿಜೆಪಿ ನಡುವಿನ ಜಟಾಪಟಿಗೆ ಕಾರಣವಾಗಿದ್ದ ಈ ಪ್ರಕರಣ ವಿರುದ್ದ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಂಸ್ಥೆ ಕೂಡಾ ಹೋರಾಟದ ಅಖಾಡಕ್ಕೆ ಧುಮುಕಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ‘ಸಿಟಿಜನ್ಸ್ ರೈಟ್ಸ್’ ತಂಡದ ಕಾನೂನು ವಿಭಾಗವು ‘ಮತದಾರರ ಪಟ್ಟಿ ಗೋಲ್ಮಾಲ್’ ಪ್ರಕರಣದ ಬಗ್ಗೆ ಕರ್ನಾಟಕ ಹೈಕೋರ್ಟ್ ( Karnatata High Court ) ಮುಖ್ಯನ್ಯಾಯಮೂರ್ತಿ ಮುಂದೆ ಅರ್ಜಿ ಸಲ್ಲಿಸಿದೆ. ಈ ಮೂಲಕ ಈ ಭಾರೀ ಅಕ್ರಮದ ತನಿಖೆಗೆ ರೋಚಕತೆಯ ತಿರುವು ಸಿಕ್ಕಿದೆ.
ಏನಿದು ಬೆಳವಣಿಗೆ..?
ಮತದಾರರ ಜಾಗೃತಿ ಕಾರ್ಯಕ್ರಮದ ನೆಪದಲ್ಲಿ, ಸಚಿವ ಅಶ್ವತ್ಥನಾರಾಯಣ್ ಆಪ್ತರ ‘ಚಿಲುಮೆ’ ಸಂಸ್ಥೆ ಮೂಲಕ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಅಕ್ರಮವಾಗಿ ಅಳಿಸಿಹಾಕಲು ರಾಜ್ಯ ಸರ್ಕಾರದ ಪ್ರಮುಖರು ಅವಕಾಶ ಮಾಡಿದ್ದಾರೆ ಎಂಬುದು ಆರೋಪ. ಈ ಅಕ್ರಮವನ್ನು ಮಾಧ್ಯಮಗಳು ಬಯಲು ಮಾಡುತ್ತಿದ್ದಂತೆಯೇ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ನವೆಂಬರ್ 17ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಮತದಾರರ ಪಟ್ಟಿ ಅಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ‘ಚಿಲುಮೆ’ ಸಂಸ್ಥೆಯ ಮುಖ್ಯಸ್ಥರೂ ಸೇರಿದಂತೆ ಭಾಗಿಯಾದವರ ವಿರುದ್ದ ಪ್ರಕರಣ ದಾಖಲಿಸಿ ಆರೋಪಗಳನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಈ ದೂರನ್ನು ನೀಡಿತ್ತು. ‘ಚಿಲುಮೆ’ ಸಂಸ್ಥೆಯವರೂ ಸೇರಿದಂತೆ ನಕಲಿ ಅಧಿಕಾರಿಗಳ ಸೋಗಿನಲ್ಲಿ ರಾಜ್ಯದ ವಿವಿಧೆಡೆ ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
BREAKING NEWS: ಚಿತ್ರರಂಗದಲ್ಲಿ ಮತ್ತೊಂದು ಅವಘಡ; ಶೂಟಿಂಗ್ ವೇಳೆ ಕ್ರೇನ್ ವೈಫಲ್ಯದಿಂದ ಸ್ಟಂಟ್ ಮಾಸ್ಟರ್ ನಿಧನ
ಈ ಹೈವೋಲ್ಟೇಜ್ ಬೆಳವಣಿಗೆಯ ನಡುವೆ, ನ.17ರಂದೇ ಬಿಬಿಎಂಪಿ ಅಧಿಕಾರಿಗಳು ತರಾತುರಿಯಲ್ಲಿ ದೂರೊಂದನ್ನು ಸಿದ್ದಪಡಿಸಿ ಬೆಂಗಳೂರಿನ ಹಲಸೂರು ಗೇಟ್ ಹಾಗೂ ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ದೂರುಗಳನ್ನಾಧರಿಸಿ ಹಲವರನ್ನು ಪೊಲೀಸರು ಬಂಧಿಸಿದ್ದರೆ, ಮತ್ತೊಂದೆಡೆ ಇಬ್ಬರು IAS ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದೆ. ಆದರೆ ಪ್ರತಿಪಕ್ಷಗಳು ನೀಡಿರುವ ದೂರನ್ನಾಧರಿಸಿ ಯಾವುದೇ ಕ್ರಮವಾಗಿಲ್ಲ, ‘ಚಿಲುಮೆ’ಗೆ ಕೆಲಸ ವಹಿಸಿಕೊಟ್ಟಿರುವ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ರ ವಿರುದ್ಧವಾಗಲೀ, ಬೆಂಗಳೂರು ನಗರದ ಉಸ್ತುವಾರಿ ಹೊಂದಿರುವ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದವಾಗಲೀ, ಸಚಿವ ಅಶ್ವತ್ಥನಾರಾಯಣ್ ವಿರುದ್ದವಾಗಲೀ ಕ್ರಮ ಕೈಗೊಳ್ಳುವ ಯಾವುದೇ ಸುಳಿವು ವ್ಯಕ್ತವಾಗಿಲ್ಲ.
ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಸ್ಥ ಕೆ.ಎ.ಪಾಲ್ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಂದೆ ಆರ್ಜಿ ಸಲ್ಲಿಸಿದ್ದಾರೆ. ಮತದಾನವು ನಾಗರಿಕರ ಮೂಲಭೂತ ಹಕ್ಕಾಗಿದೆ. ಈ ಹಕ್ಕನ್ನು ಕಸಿದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಸಂವಿಧಾನಕ್ಕೆ ಕೊಟ್ಟಿರುವ ಏಟು ಎಂದು ಪ್ರತಿಪಾದಿಸಿರುವ ಕೆ.ಎ.ಪಾಲ್, ಈ ಅಕ್ರಮದ ಕುರಿತಂತೆ ಕೆಪಿಸಿಸಿ ನಾಯಕರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರು ಹಾಗೂ ಎಐಸಿಸಿ ಮುಖಂಡರು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿರುವ ಅಂಶಗಳನ್ನು ಪರಿಗಣಿಸಿ ಸಮಗ್ರ ತನಿಖೆಯಾಗಬೇಕಿದೆ ಎಂದು ಹೈಕೋರ್ಟಿನ ಗಮನಸೆಳೆದಿದ್ದಾರೆ. ‘ಚಿಲುಮೆ’ ಸಂಸ್ಥೆಗೆ ಮತದಾರಾರ ಪಟ್ಟಿ ಪರಿಷ್ಕರಿಸುವ ಸಂಬಂಧ ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಅವರು ನೀಡಿರುವ ಆದೇಶವೇ ಸರಿಯಾದ ಕ್ರಮವಲ್ಲ ಎಂದು ಆರೋಪಿಸಿ ಮಾಜಿ ಶಾಸಕ ರಮೇಶ್ ಬಾಬು ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿರುವ ದೂರು ಕೂಡಾ ಗಂಭೀರ ಸ್ವರೂಪದ್ದಾಗಿದೆ. ಜೊತೆಗೆ ಈ ಅಕ್ರಮ ಬಗ್ಗೆ ಬಿಜೆಪಿ ನೀಡಿರುವ ದೂರನ್ನೂ ತನಿಖಾಧಿಕಾರಿಗಳು ಪರಿಗಣಿಸಬೇಕಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಮತದಾರರ ಪಟ್ಟಿ ಅಕ್ರಮ ಕೇಸ್ ಕುರಿತಂತೆ ಪೊಲೀಸರು ನಡೆಸುತ್ತಿರುವ ತನಿಖೆಯ ಕಾರ್ಯವೈಖರಿ ಗಮನಿಸಿದರೆ ಪ್ರಭಾವಿಗಳು ತಪ್ಪಿಸಿಕೊಳ್ಳುವ ಸಂಭವವಿದೆ. ಪ್ರತಿಪಕ್ಷಗಳು ತಮ್ಮ ದೂರಿನಲ್ಲಿ ಯಾರ ಮೇಲೆ ಆರೋಪ ಹೊರಿಸಿದ್ದಾರೋ ಆ ಆರೋಪ ಹೊತ್ತಿರುವವರೇ ಈ ರಾಜ್ಯವನ್ನು ಆಳುತ್ತಿರುವುದರಿಂದ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಸಮಾಜಿಕ ನ್ಯಾಯ ಸಿಗುವುದೂ ಅನುಮಾನ ಎಂದು ಹೈಕೋರ್ಟ್ನ ಗಮನಸೆಳೆದಿರುವ ‘ಸಿಟಿಜನ್ ರೈಟ್ಸ್’ ಅಧ್ಯಕ್ಷ ಕೆ.ಎ.ಪಾಲ್, ದೇಶದ ವ್ಯವಸ್ಥೆಗೆ ಹೊಡೆತ ಕೊಟ್ಟಿರುವ ಈ ಅಕ್ರಮದ ಕುರಿತಂತೆ ಹೈಕೋರ್ಟ್ ಉಸ್ತುವಾರಿಯಲ್ಲೇ ತನಿಖೆ ನಡೆಸಬೇಕು. ಈ ಸಂಬಂಧ ವಿಶೇಷ ತನಿಖಾ ತಂಡ ರಚಿಸಲು ನಿರ್ದಶನ ನೀಡಬೇಕೆಂದು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.