ಬರ್ಲಿನ್: ಜರ್ಮನಿಯ ಪಶ್ಚಿಮ ನಗರವಾದ ಮೊಯೆರ್ಸ್ (Moers) ನಲ್ಲಿರುವ ಸಿಖ್ ಗುರುದ್ವಾರವೊಂದು ಇಂದು (ಏಪ್ರಿಲ್ 21, 2026) ರಣಾಂಗಣವಾಗಿ ಮಾರ್ಪಟ್ಟಿದೆ. ಗುರುದ್ವಾರದ ಆಡಳಿತ ಮಂಡಳಿಯ ಅಧಿಕಾರ ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದು, ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸುಮಾರು 40ಕ್ಕೂ ಹೆಚ್ಚು ಜನರಿದ್ದ ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ. ಕಿಡಿಗೇಡಿಗಳು ಚಾಕು, ಕಿರಪಾಣಿ (ಸಿಖ್ಖರ ಪವಿತ್ರ ಖಡ್ಗ) ಮತ್ತು ಪೆಪ್ಪರ್ ಸ್ಪ್ರೇ ಬಳಸಿ ಪರಸ್ಪರ ದಾಳಿ ನಡೆಸಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಶಬ್ದವೂ ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗುರುದ್ವಾರದ ಹಳೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಸೋತ ನಂತರ, ಹೊಸ ಮಂಡಳಿಯ ಮೇಲೆ ನಿಯಂತ್ರಣ ಸಾಧಿಸಲು ಮತ್ತು ದೇಣಿಗೆ ಹಣದ (ಗೋಲಕ್) ವಿಚಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ಹಲವರು ಆರೋಪಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 11 ಜನರಿಗೆ ತಲೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜರ್ಮನ್ ಪೊಲೀಸರು ಖಚಿತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಶೇಷ ಕಮಾಂಡೋ ಪಡೆಗಳು ಮತ್ತು ಹೆಲಿಕಾಪ್ಟರ್ ಮೂಲಕ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಇಡೀ ಗುರುದ್ವಾರವನ್ನು ಸೀಲ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.








