ಉತ್ತರಕನ್ನಡ : ನನಗೆ ಪಿಎಸ್ಐ ಅಧಿಕಾರಿಯೊಬ್ಬರು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಪೊಲೀಸ್ ಠಾಣೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ.
ಹೌದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಭಾಸ್ಕರ್ ಬೋಂಡೆಲ್ಕರ್ (36) ಎಂದು ಹೇಳಲಾಗುತ್ತಿದ್ದು, ಆತ ಠಾಣೆಯ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಾಸಿದ್ದಾನೆ ಎಂದು ಹೇಳಲಾಗುತ್ತಿದೆ.ಪಿಎಸ್ಐ ಬಸವರಾಜ್ ಮಗನೂರು ಜೂಜಾಟ ಆರೋಪದಡಿ ಭಾಸ್ಕರ್ ಬೋಂಡೆಲ್ಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪಿಎಸ್ಐ ವಿರುದ್ಧ ವಿಡಿಯೋ ಮಾಡಿ ಭಾಸ್ಕರ್ ಆರೋಪ ಮಾಡಿದ್ದಾನೆ. ಜೂಜಾಟದಲ್ಲಿ ಸಿಕ್ಕಿ ಬಿದ್ದಾಗ 3,60,00 ರೂ. ಅನ್ನು 36,000 ರೂ. ಎಂದು ಪೊಲೀಸರು ತೋರಿಸಿದ್ರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದೆ. ತಾನೀಗ ಚಾಲಕ ವೃತ್ತಿ ನಡೆಸುತ್ತಿದ್ದು, ರಾಮನಗರ ತೆರಳಿದಾಗ ಮತ್ತೆ ಪೊಲೀಸರು ಕಿರುಕುಳ ನೀಡಿದ್ದಾರೆ. ಈ ಕಾರಣದಿಂದ ಆತ್ಮಹತ್ಯೆ ನಡೆಸಲು ಯತ್ನಿಸಿದ್ದೇನೆ ಎಂದು ಭಾಸ್ಕರ್ ಹೇಳಿದ್ದಾನೆ.
ನಿನ್ನೆ ದಿನ ಜಮೀನು ವಿಚಾರದಲ್ಲಿ ಭಾಸ್ಕರ್ ಮದ್ಯ ಸೇವಿಸಿ ಬೈಕ್ ನಲ್ಲಿ ಠಾಣೆಗೆ ತೆರಳಿದ್ದನು. ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ಐ ಸೂಚಿಸಿದ್ದರು. ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡ ಭಾಸ್ಕರ್ನನ್ನು ಬೆಳಗಾವಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.