ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು 55ನೇ ದಿನಕ್ಕೆ ಕಾಲಿಟ್ಟಿದ್ದು, ಜಗತ್ತಿನಾದ್ಯಂತ ಅಣುಬಾಂಬ್ ಬಳಕೆಯ ಕುರಿತು ಆತಂಕ ಮೂಡಿತ್ತು. ಈ ಕುರಿತು ಗುರುವಾರ ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ವಿರುದ್ಧ ಅಣುಬಾಂಬ್ ಬಳಸುವ ಯಾವುದೇ ಉದ್ದೇಶ ನನಗಿಲ್ಲ,” ಎಂದು ಸ್ಪಷ್ಟಪಡಿಸುವ ಮೂಲಕ ಜಾಗತಿಕ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಅಮೆರಿಕದ ಸಾಂಪ್ರದಾಯಿಕ ದಾಳಿಗಳೇ ಇರಾನ್ ಅನ್ನು ಹಣ್ಣುಗಾಯಿಗಾಗಿಸಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ನಾವು ಈಗಾಗಲೇ ಇರಾನ್‌ನ ನೌಕಾಪಡೆ ಮತ್ತು ವಾಯುಪಡೆಯನ್ನು ಧ್ವಂಸಗೊಳಿಸಿದ್ದೇವೆ. ಅಣುಬಾಂಬ್ ಬಳಸದೆ ನಾವು ಅವರನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದೇವೆ. ಹೀಗಿರುವಾಗ ಅಣುಬಾಂಬ್ ಬಳಸುವ ಪ್ರಶ್ನೆಯೇ ಬರುವುದಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ.
‘ಡೆಸಿಮೇಟೆಡ್ ಇರಾನ್’: ಇರಾನ್‌ನ ರಕ್ಷಣಾ ವ್ಯವಸ್ಥೆಗಳು ಈಗಾಗಲೇ ನೆಲಸಮವಾಗಿವೆ. ಅಮೆರಿಕದ ಶಕ್ತಿಯ ಮುಂದೆ ಇರಾನ್ ಮಂಡಿಯೂರಿದೆ ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.
ಇರಾನ್ ಜೊತೆಗಿನ ಹೊಸ ಶಾಂತಿ ಒಪ್ಪಂದಕ್ಕೆ ತಮಗೆ ಯಾವುದೇ ಆತುರವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. “ನನ್ನನ್ನು ಆತುರಪಡಿಸಬೇಡಿ (Don’t rush me), ನನಗೆ ಅತ್ಯುತ್ತಮ ಒಪ್ಪಂದ ಬೇಕು,” ಎಂದು ಅವರು ತಿಳಿಸಿದ್ದಾರೆ.
ಇರಾನ್‌ನ ‘ಗ್ಯಾಂಗ್‌ಸ್ಟರ್‌ಗಳು’ ಹಾರ್ಮುಜ್ ಜಲಸಂಧಿಯಲ್ಲಿ ಮೈನ್‌ಗಳನ್ನು ಹರಡುತ್ತಿದ್ದಾರೆ. ಅಂತಹ ಸಣ್ಣ ದೋಣಿಗಳನ್ನು ಕಂಡ ತಕ್ಷಣ ಹೊಡೆದುರುಳಿಸಲು (Shoot and Kill) ನೌಕಾಪಡೆಗೆ ಆದೇಶ ನೀಡಿರುವುದಾಗಿ ಅವರು ಘೋಷಿಸಿದ್ದಾರೆ.








