ವಾಷಿಂಗ್ಟನ್: ಪಶ್ಚಿಮ ಏಷ್ಯಾದ ಸಾಗರ ಮಾರ್ಗಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಉತ್ತುಂಗಕ್ಕೆ ತಲುಪಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯಲ್ಲಿ ಎರಡು ಹಡಗುಗಳ ಮೇಲೆ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ, ಅಮೆರಿಕ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ಇರಾನ್ ಜೊತೆ ಸಂಪರ್ಕ ಹೊಂದಿರುವ ಬೃಹತ್ ಸರಕು ಹಡಗನ್ನು ವಶಪಡಿಸಿಕೊಂಡಿದೆ.
ಹಿಂದೂ ಮಹಾಸಾಗರದ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುತ್ತಿದ್ದ ಇರಾನ್ ಲಿಂಕ್ ಇರುವ ಹಡಗನ್ನು ಅಮೆರಿಕದ ಯುದ್ಧನೌಕೆಗಳು ಸುತ್ತುವರೆದು ತಮ್ಮ ವಶಕ್ಕೆ ಪಡೆದಿವೆ. ಇರಾನ್‌ನ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂಬ ಬಲವಾದ ಸಂದೇಶವನ್ನು ಟ್ರಂಪ್ ಆಡಳಿತ ಈ ಮೂಲಕ ರವಾನಿಸಿದೆ.
ಬುಧವಾರವಷ್ಟೇ ಇರಾನ್‌ನ IRGC ಪಡೆಗಳು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಸೇರಿದ ಎರಡು ಹಡಗುಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದವು. ಇದಕ್ಕೆ ಪ್ರತಿಯಾಗಿ ಅಮೆರಿಕ ಈಗ ಈ ಕ್ರಮ ಕೈಗೊಂಡಿದೆ.
ವಶಪಡಿಸಿಕೊಳ್ಳಲಾದ ಹಡಗು ಅಕ್ರಮವಾಗಿ ತೈಲ ಸಾಗಿಸುತ್ತಿತ್ತು ಅಥವಾ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು ಎಂಬ ಸಂಶಯವನ್ನು ಅಮೆರಿಕ ವ್ಯಕ್ತಪಡಿಸಿದೆ. ಪ್ರಸ್ತುತ ಹಡಗನ್ನು ಹತ್ತಿರದ ಅಮೆರಿಕನ್ ಮಿತ್ರ ರಾಷ್ಟ್ರದ ಬಂದರಿಗೆ ಕೊಂಡೊಯ್ಯಲಾಗುತ್ತಿದೆ.
ಸಾಗರ ಮಾರ್ಗಗಳಲ್ಲಿ ಒಬ್ಬರ ಹಡಗನ್ನು ಮತ್ತೊಬ್ಬರು ಗುರಿ ಮಾಡುತ್ತಿರುವುದು ಪೂರ್ಣ ಪ್ರಮಾಣದ ನೌಕಾ ಯುದ್ಧಕ್ಕೆ (Naval War) ದಾರಿ ಮಾಡಿಕೊಡುತ್ತದೆಯೇ ಎಂಬ ಆತಂಕ ಜಾಗತಿಕ ಮಟ್ಟದಲ್ಲಿ ಮೂಡಿದೆ.








