ಇಸ್ಲಾಮಾಬಾದ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡವನ್ನು ಸರಿಸಲು ರಾಜತಾಂತ್ರಿಕ ಪ್ರಯತ್ನಗಳು ವೇಗ ಪಡೆದುಕೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಇರಾನ್ ಜೊತೆಗಿನ ಕದನ ವಿರಾಮ (Ceasefire) ಮಾತುಕತೆಗಾಗಿ ಸೋಮವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಹೋರ್ಮುಜ್ ಜಲಸಂಧಿಯಲ್ಲಿನ ಸಂಘರ್ಷ ಮತ್ತು ಇರಾನ್ ಮೇಲಿನ ದಾಳಿಗಳ ನಂತರ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಈ ಸಭೆಯು ಜಾಗತಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.
ಟ್ರಂಪ್ ಅವರ ಅತ್ಯಂತ ನಿಕಟವರ್ತಿಗಳಾದ ಜೇರೆಡ್ ಕುಶ್ನರ್ ಮತ್ತು ಮಧ್ಯಪ್ರಾಚ್ಯದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಈ ಮಾತುಕತೆಯನ್ನು ಮುನ್ನಡೆಸಲಿದ್ದಾರೆ.ಇರಾನ್ ಮತ್ತು ಅಮೆರಿಕ ನಡುವೆ ಸದ್ಯಕ್ಕೆ ಘೋಷಣೆಯಾಗಿರುವ ತಾತ್ಕಾಲಿಕ ಕದನ ವಿರಾಮವನ್ನು ಖಾಯಂ ಮಾಡುವುದು ಮತ್ತು ಶಾಂತಿ ಒಪ್ಪಂದಕ್ಕೆ ಅಂತಿಮ ರೂಪ ನೀಡುವುದು ಈ ಪ್ರವಾಸದ ಪ್ರಮುಖ ಗುರಿಯಾಗಿದೆ.








