ಟೆಹ್ರಾನ್:ಒಂದೆಡೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕ ಮತ್ತು ಇರಾನ್ ನಡುವೆ ಮಹತ್ವದ ಕದನ ವಿರಾಮ (Ceasefire) ಮಾತುಕತೆಗಳು ಜಾರಿಯಲ್ಲಿದ್ದರೆ, ಮತ್ತೊಂದೆಡೆ ಜಾಗತಿಕವಾಗಿ ಅತ್ಯಂತ ಕಾರ್ಯತಂತ್ರದ ಜಲಮಾರ್ಗವಾಗಿರುವ ‘ಹೊರ್ಮುಜ್ ಜಲಸಂಧಿ’ (Strait of Hormuz) ಬಳಿ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಇರಾನ್ನ ಸಶಸ್ತ್ರ ಪಡೆಗಳು ಅಮೆರಿಕದ ಯುದ್ಧನೌಕೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಸೇನೆಯು ಇರಾನ್ನ ಕ್ಷಿಪಣಿ ಉಡಾವಣಾ ನೆಲೆಗಳು ಹಾಗೂ ಸೇನಾ ದೋಣಿಗಳ ಮೇಲೆ ಭೀಕರ ‘ಸ್ವರಕ್ಷಣೆ ದಾಳಿ’ (Self-defense strikes) ನಡೆಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿ ಪ್ರಕಾರ, ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಅಮೆರಿಕ ನೌಕಾಪಡೆಯ ಮೂರು ಪ್ರಮುಖ ಯುದ್ಧನೌಕೆಗಳನ್ನು (ಡಿಸ್ಟ್ರಾಯರ್ಸ್) ಗುರಿಯಾಗಿಸಿಕೊಂಡು ಇರಾನ್ ಪಡೆಗಳು ಡ್ರೋನ್, ಕ್ಷಿಪಣಿ ಹಾಗೂ ಸಣ್ಣ ದೋಣಿಗಳ ಮೂಲಕ ದಿಢೀರ್ ದಾಳಿ ನಡೆಸಿದ್ದವು. ಅಷ್ಟೇ ಅಲ್ಲದೆ, ಇರಾನ್ನ ದೋಣಿಗಳು ಈ ಸೂಕ್ಷ್ಮ ಜಲಮಾರ್ಗದಲ್ಲಿ ಕಡಲ ಗಣಿಗಳನ್ನು (Sea Mines) ಅಳವಡಿಸಲು ಯತ್ನಿಸುತ್ತಿದ್ದವು ಎನ್ನಲಾಗಿದೆ.
ಇರಾನ್ನ ಈ ಪ್ರಚೋದನಾತ್ಮಕ ದಾಳಿಯನ್ನು ಅಮೆರಿಕದ ನೌಕಾಪಡೆಯು ಯಶಸ್ವಿಯಾಗಿ ತಡೆದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಮೆರಿಕದ ವಾಯುಪಡೆ ಹಾಗೂ ನೌಕಾಪಡೆಗಳು, ದಕ್ಷಿಣ ಇರಾನ್ನ ಬಂದರ್ ಅಬ್ಬಾಸ್ ಮತ್ತು ಕೇಶ್ಮ್ ಬಂದರು ಪ್ರದೇಶಗಳಲ್ಲಿದ್ದ ಇರಾನ್ನ ಕ್ಷಿಪಣಿ ಉಡಾವಣಾ ಕೇಂದ್ರಗಳು, ಕಮಾಂಡ್ ಕಂಟ್ರೋಲ್ ರೂಮ್ಗಳು ಮತ್ತು ಮೈನ್ಗಳನ್ನು ಬಿಡುತ್ತಿದ್ದ ಇರಾನ್ ಕ್ರಾಂತಿಕಾರಿ ಗಾರ್ಡ್ಸ್ (IRGC) ದೋಣಿಗಳ ಮೇಲೆ ಪ್ರತಿಹೋರಾಟ ನಡೆಸಿ ಅವುಗಳನ್ನು ಧ್ವಂಸಗೊಳಿಸಿವೆ.








