ಬಲ್ಲಿಯಾ (ಉತ್ತರ ಪ್ರದೇಶ): ಇಂಧನ ಖಾಲಿಯಾದ ಕಾರಣ ಆಂಬುಲೆನ್ಸ್‌ಗೆ ಪೆಟ್ರೋಲ್ ಹಾಕಿಸಲು ಬಂದಿದ್ದರೂ, ಸ್ಟಾಕ್ ಇಲ್ಲ ಎಂಬ ಸುಳ್ಳು ನೆಪ ಹೇಳಿ ಇಂಧನ ನೀಡಲು ನಿರಾಕರಿಸಿದ ಪರಿಣಾಮ ಎದೆನೋವಿನಿಂದ ಬಳಲುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೆಟ್ರೋಲ್ ಬಂಕ್ ಮ್ಯಾನೇಜರ್ ವಿರುದ್ಧ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಲ್ಲಿಯಾ ಜಿಲ್ಲೆಯ ಬೈರಿಯಾ ತೆಹಸಿಲ್‌ನ ಪಾಂಡೇಪುರ ಗ್ರಾಮದ ನಿವಾಸಿ ಛತ್ಥು ಶರ್ಮಾ (50).ಏಪ್ರಿಲ್ 22, ಬುಧವಾರ ರಾತ್ರಿ ಸುಮಾರು 9:20ಕ್ಕೆ ಈ ಘಟನೆ ನಡೆದಿದೆ.
ಛತ್ಥು ಶರ್ಮಾ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಾಗ, ಗ್ರಾಮದ ಮುಖ್ಯಸ್ಥ ಸತ್ಯೇಂದ್ರ ಯಾದವ್ ಅವರು ಖಾಸಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ದಾರಿಯಲ್ಲಿ ಇಂಧನ ಖಾಲಿಯಾದಾಗ ತೇಂಗ್ರಾಹಿ ಗ್ರಾಮದ ಬಳಿಯ ‘ಭೂಷಣ್ ಸರ್ವಿಸ್ ಸ್ಟೇಷನ್’ಗೆ ತೆರಳಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಇಂಧನ ನೀಡಲು ನಿರಾಕರಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೂರೈಕೆ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಹೊರಬಂದಿವೆ:
ಸ್ಟಾಕ್ ಲಭ್ಯತೆ: ಪೆಟ್ರೋಲ್ ಬಂಕ್ ಸಿಬ್ಬಂದಿ ಇಂಧನ ಇಲ್ಲ ಎಂದು ಹೇಳಿದ್ದರು. ಆದರೆ ತನಿಖಾಧಿಕಾರಿಗಳು ಪರಿಶೀಲಿಸಿದಾಗ ಬಂಕ್‌ನಲ್ಲಿ 4595 ಲೀಟರ್ ಪೆಟ್ರೋಲ್ ಮತ್ತು 4784 ಲೀಟರ್ ಡೀಸೆಲ್ ದಾಸ್ತಾನು ಇರುವುದು ದೃಢಪಟ್ಟಿದೆ.ಆಂಬುಲೆನ್ಸ್ ಬಂಕ್‌ಗೆ ಬಂದಿರುವುದು ಮತ್ತು 15 ನಿಮಿಷಗಳ ಕಾಲ ಅಲ್ಲಿ ನಿಂತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.








