ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ (ಏಪ್ರಿಲ್ 19) ನಡೆದ ಭದ್ರತಾ ತಪಾಸಣೆ ವೇಳೆ, ಅಕ್ರಮವಾಗಿ ಸ್ಯಾಟಲೈಟ್ ಫೋನ್ ಹೊಂದಿದ್ದ ಇಬ್ಬರು ಅಮೆರಿಕ ಪ್ರಜೆಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಭಾರತದಲ್ಲಿ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ನಿಲ್ದಾಣದ ಸಾಮಾನ್ಯ ತಪಾಸಣೆಯ ವೇಳೆ ಅಮೆರಿಕದ ಮೊಂಟಾನಾ ನಿವಾಸಿ ಜಿಯೋಫ್ರಿ ಸ್ಕಾಟ್ ಮತ್ತು ಅವರ ಜೊತೆಯಲ್ಲಿದ್ದ ಹಾಲ್ದರ್ ಕೌಶಿಕ್ ಎಂಬುವವರ ಲಗೇಜ್‌ನಲ್ಲಿ ‘ಗಾರ್ಮಿನ್’ (Garmin) ಕಂಪನಿಯ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಾಥಮಿಕ ವಿಚಾರಣೆಯ ನಂತರ, ಈ ಇಬ್ಬರು ಅಮೆರಿಕನ್ನರನ್ನು ಮುಂದಿನ ತನಿಖೆಗಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಭಾರತೀಯ ಟೆಲಿಗ್ರಾಫ್ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.








