ಲಕ್ನೋ: ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳ (ATS) ಗುರುವಾರ ಬಂಧಿಸಿದೆ. ಬಂಧಿತರು ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ಗಳು ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ (ISI) ನಿರ್ದೇಶನದಂತೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತರನ್ನು ಮೀರತ್ ಮೂಲದ ತುಷಾರ್ ಚೌಹಾಣ್ ಅಲಿಯಾಸ್ ಹಿಜ್ಬುಲ್ಲಾ ಅಲಿ ಖಾನ್ (20) ಮತ್ತು ದೆಹಲಿಯ ಸೀಮಾಪುರಿ ನಿವಾಸಿ ಸಮೀರ್ ಖಾನ್ (20) ಎಂದು ಗುರುತಿಸಲಾಗಿದೆ.
ದೆಹಲಿ ಮತ್ತು ಉತ್ತರ ಪ್ರದೇಶದ ಜನನಿಬಿಡ ಪ್ರದೇಶಗಳು ಹಾಗೂ ರಾಜಕೀಯ ಸಂಘಟನೆಗಳ ಕಚೇರಿಗಳ ಮೇಲೆ ಗ್ರೇನೆಡ್ ದಾಳಿ ನಡೆಸಲು ಇವರು ಯೋಜಿಸಿದ್ದರು. ಅಲ್ಲದೆ, ಕೆಲವು ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲು ಇವರಿಗೆ ಸೂಚನೆ ನೀಡಲಾಗಿತ್ತು ಎಂದು ಎಟಿಎಸ್ ತಿಳಿಸಿದೆ.
ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ಗಳಾದ ಶಹಜಾದ್ ಭಟ್ಟಿ ಮತ್ತು ಅಬಿದ್ ಜಟ್ ಅವರೊಂದಿಗೆ ಇವರು ಸಂಪರ್ಕದಲ್ಲಿದ್ದರು. ಇವರು ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.








