ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ (ಸ್ಥಳೀಯ ಕಾಲಮಾನ) ರಷ್ಯಾ ಮತ್ತು ಉಕ್ರೇನ್ ನಡುವೆ ಮೂರು ದಿನಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಈ ತಾತ್ಕಾಲಿಕ ಕದನ ವಿರಾಮವು ಎರಡನೇ ಮಹಾಯುದ್ಧದಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಪಾತ್ರವನ್ನು ಸ್ಮರಿಸುವ ರಷ್ಯಾದ ‘ವಿಜಯ ದಿನಾಚರಣೆ’ಯ (Victory Day) ಸಂದರ್ಭದಲ್ಲೇ ಬಂದಿದೆ ಎಂಬುದು ಗಮನಾರ್ಹ.
ತಮ್ಮ ‘ಟ್ರುತ್ ಸೋಶಿಯಲ್’ (Truth Social) ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಈ ಕದನ ವಿರಾಮವು ಮೇ 9 ರಿಂದ 11 ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಎರಡೂ ದೇಶಗಳ ನಡುವಿನ “ಎಲ್ಲಾ ರೀತಿಯ ಸಶಸ್ತ್ರ ದಾಳಿಗಳನ್ನು” (Kinetic Activity) ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
”ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮೂರು ದಿನಗಳ ಕಾಲ (ಮೇ 9, 10 ಮತ್ತು 11) ಕದನ ವಿರಾಮವಿರುತ್ತದೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ರಷ್ಯಾದಲ್ಲಿ ಈ ಸಂಭ್ರಮಾಚರಣೆಯು ವಿಜಯ ದಿನಕ್ಕಾಗಿ ನಡೆಯುತ್ತಿದೆ, ಅದೇ ರೀತಿ ಉಕ್ರೇನ್‌ನಲ್ಲೂ ಇದು ಆಚರಿಸಲ್ಪಡುತ್ತದೆ. ಏಕೆಂದರೆ ಎರಡನೇ ಮಹಾಯುದ್ಧದಲ್ಲಿ ಉಕ್ರೇನ್ ಕೂಡ ಒಂದು ದೊಡ್ಡ ಭಾಗ ಮತ್ತು ಪ್ರಮುಖ ಅಂಶವಾಗಿತ್ತು,” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
2022ರಲ್ಲಿ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ನಂತರ ಆರಂಭವಾಗಿ, ಫೆಬ್ರವರಿ 2026ಕ್ಕೆ ಐದನೇ ವರ್ಷಕ್ಕೆ ಕಾಲಿಟ್ಟಿರುವ ಈ ಭೀಕರ ಯುದ್ಧಕ್ಕೆ, ಈ ತಾತ್ಕಾಲಿಕ ವಿರಾಮವು “ಅಂತ್ಯದ ಆರಂಭ”ವಾಗಬಹುದು ಎಂದು ಅಮೆರಿಕ ಅಧ್ಯಕ್ಷರು ಆಶಾವಾದ ವ್ಯಕ್ತಪಡಿಸಿದ್ದಾರೆ.








