ನವದೆಹಲಿ:ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಸಾಮಾನ್ಯ ಜನರಿಗೆ ನೆಮ್ಮದಿಯ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಖಾಸಗಿ ಆಸ್ಪತ್ರೆಗಳ ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ಲಾಭಾಂಶಕ್ಕೆ (Trade Margin) ಮಿತಿ ಹೇರಲು ಕೇಂದ್ರ ಆರೋಗ್ಯ ಸಚಿವಾಲಯವು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಆಸ್ಪತ್ರೆಗಳು ಸಿರಿಂಜ್, ಗ್ಲೌಸ್‌ನಂತಹ ಸಾಮಾನ್ಯ ವಸ್ತುಗಳಿಂದ ಹಿಡಿದು ಪೇಸ್‌ಮೇಕರ್, ಹಾರ್ಟ್ ವಾಲ್ವ್‌ಗಳಂತಹ ದುಬಾರಿ ಉಪಕರಣಗಳ ಮೇಲೆ ಅತಿ ಹೆಚ್ಚಿನ ಲಾಭಾಂಶ ಪಡೆಯುತ್ತಿವೆ ಎಂಬ ದೂರುಗಳಿವೆ. ಹೀಗಾಗಿ, ಮೂಲ ಬೆಲೆಗಿಂತ ಇಂತಿಷ್ಟೇ ಹೆಚ್ಚಿನ ದರ ವಿಧಿಸಬೇಕು ಎಂಬ ‘ಕ್ಯಾಪ್’ (Cap) ಹಾಕಲು ಸರ್ಕಾರ ಉದ್ದೇಶಿಸಿದೆ.
ದೇಶದಾದ್ಯಂತ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗಳಿಗೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಒಂದೇ ರೀತಿಯ (Standard Package Rates) ದರಗಳನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಸೂಚನೆ ನೀಡಿದೆ. ಇದರಿಂದ ಒಂದೊಂದು ಆಸ್ಪತ್ರೆಯಲ್ಲಿ ಒಂದೊಂದು ದರ ವಿಧಿಸುವುದಕ್ಕೆ ಕಡಿವಾಣ ಬೀಳಲಿದೆ.
‘ರಾಷ್ಟ್ರೀಯ ವೈದ್ಯಕೀಯ ಬೆಲೆ ನಿಗದಿ ಮತ್ತು ನಿಯಂತ್ರಣ ಆಯೋಗದ ಮಸೂದೆ, 2026’ (National Medical Pricing and Regulation Commission Bill, 2026) ಎಂಬ ಹೊಸ ಕಾನೂನನ್ನು ತರಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಜಾರಿಗೆ ಬಂದರೆ, ಖಾಸಗಿ ಆಸ್ಪತ್ರೆಗಳ ಚಾರ್ಜ್‌ಗಳನ್ನು ನಿಯಂತ್ರಿಸಲು ಸ್ವತಂತ್ರ ಆಯೋಗವೊಂದು ಅಸ್ತಿತ್ವಕ್ಕೆ ಬರಲಿದೆ.








