ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಬೆಳವಣಿಗೆ ನಡೆದಿದ್ದು, ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಬ್ರೇಕ್ ಫಾಸ್ಟ್ ನಲ್ಲಿ ಭಾಗಿಯಾಗಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಒಗ್ಗಟ್ಟು ಪ್ರದರ್ಶಿಸಿದ್ದರು.ಇದೀಗ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಮನೆಗೆ ಬ್ರೇಕ್ ಫಾಸ್ಟ್ ಗೆ ಇಂದು ತೆರಳಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಡಿಸಿಎಂ ಹಾಗೂ ಸಿಎಂ ಇಬ್ಬರು ಒಟ್ಟಿಗೆ ಉಪಹಾರ ಮಾಡಿ ತಮ್ಮ ಮಧ್ಯ ಭಿನ್ನಾಭಿಪ್ರಾಯ ಇಲ್ಲ. ತಾವು ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ತಿಳಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದ್ದರು. ಅದರ ಬೆನ್ನಲ್ಲೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಮನೆಗೆ ಉಪಹಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಡಿಸಿಎಂ ಆಹ್ವಾನ ಒಪ್ಪಿದ ಸಿಎಂ ಸಿದ್ದರಾಮಯ್ಯ ತಮ್ಮ ಆಹ್ವಾನದಂತೆ ಮನಗೆ ಬರುವುದಾಗಿ ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 9.30ಕ್ಕೆ ಉಪಹಾರದ ಜೊತೆಗೆ ಒಂದಷ್ಟು ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಲಿದ್ದಾರೆ. ಇತ್ತ ಅಧಿಕಾರ ಹಂಚಿಕೆಗೆ ಕಿತ್ತಾಡಿದ್ದ ಉಭಯ ನಾಯಕರಿಂದ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ಶುರುವಾಗಿದೆ ಎಂದು ವಿಪಕ್ಷ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸಿಎಂ ಫೆವರೇಟ್ ನಾಟಿ ಕೋಳಿ ಸಾರು, ಉಪಹಾರ ರೆಡಿ!
ಸಿದ್ದರಾಮಯ್ಯ ಅವರು ಡಿಸಿಎಂ ನಿವಾಸಕ್ಕೆ ತೆರಳುವುದು ಖಚಿತವಾಗಿದೆ. ಇದರ ಬೆನ್ನಲ್ಲೆ ಡಿಕೆಶಿ ಅವರ ಮನೆಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಕನಕಪುರದಿಂದ ನಾಟಿ ಕೋಳಿಗಳನ್ನು ತರಲಾಗಿದೆ. ಮುಖ್ಯಮಂತ್ರಿಗಳಿಗೆ ನಾಟಿ ಕೋಳಿ ಸಾರು ಇಷ್ಟ. ನಾಳೆಯ ಉಪಹಾರದಲ್ಲಿ ವೆಜ್ ಜೊತೆಗೆ ನಾಜ್ ವೆಜ್ ಉಪಹಾರ ಸಹ ಇರಲಿದೆ. ಇಡ್ಲಿ, ಪೂರಿ, ಸಿಹಿ ತಿಂಡಿ ಜೊತೆಗೆ ನಾಟಿ ಕೋಳಿ ಸಾರು ಸಹಿತ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.








