ನವದೆಹಲಿ: ಇಂದಿನ ಓಟದ ಬದುಕಿನಲ್ಲಿ ಕೆಲಸದ ಒತ್ತಡ ಅಥವಾ ಮೊಬೈಲ್ ಬಳಕೆಯಿಂದಾಗಿ ರಾತ್ರಿ ಪೂರ್ತಿ ಜಾಗರಣೆ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಕೇವಲ ಒಂದು ರಾತ್ರಿ ನೀವು ನಿದ್ದೆ ಮಾಡದಿದ್ದರೆ ಅದು ನಿಮ್ಮ ಮೆದುಳಿನ ಮೇಲೆ ಎಷ್ಟು ಭೀಕರ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸಂಶೋಧಕರು ಆತಂಕಕಾರಿ ಸಂಗತಿಗಳನ್ನು ಹೊರಹಾಕಿದ್ದಾರೆ.
ಒಂದು ರಾತ್ರಿ ನಿದ್ದೆ ಇಲ್ಲದಿದ್ದರೆ ನಿಮ್ಮ ಮೆದುಳು ಇದ್ದಕ್ಕಿದ್ದಂತೆ 1 ರಿಂದ 2 ವರ್ಷ ವಯಸ್ಸಾದಂತೆ ವರ್ತಿಸುತ್ತದೆ ಎಂದು ನರವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಮೆದುಳಿನ ದ್ರವ ಪದಾರ್ಥಗಳಲ್ಲಿ (Brain Tissue) ಬದಲಾವಣೆ ಉಂಟಾಗಿ, ಮೆದುಳು ವೃದ್ಧಾಪ್ಯದ ಲಕ್ಷಣಗಳನ್ನು ತೋರಿಸಲಾರಂಭಿಸುತ್ತದೆ.
ನಿದ್ದೆಯ ಸಮಯದಲ್ಲಿ ನಮ್ಮ ಮೆದುಳು ‘ಗ್ಲಿಂಫಾಟಿಕ್ ಸಿಸ್ಟಮ್’ ಮೂಲಕ ದಿನವಿಡೀ ಸಂಗ್ರಹವಾದ ಕಸ ಅಥವಾ ವಿಷಕಾರಿ ಪ್ರೋಟೀನ್ಗಳನ್ನು (Amyloid-beta) ಹೊರಹಾಕುತ್ತದೆ. ಒಂದು ರಾತ್ರಿ ನಿದ್ದೆ ಬಿಟ್ಟರೆ ಈ ಕಸ ಮೆದುಳಿನಲ್ಲೇ ಉಳಿದು ಜೀವಕೋಶಗಳಿಗೆ ಹಾನಿ ಮಾಡುತ್ತದೆ.
ನಿದ್ದೆಯಿಲ್ಲದ ಮೆದುಳಿನಲ್ಲಿ ಭಾವನೆಗಳನ್ನು ನಿಯಂತ್ರಿಸುವ ‘ಅಮಿಗ್ಡಾಲಾ’ (Amygdala) ಭಾಗವು ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಇದರಿಂದಾಗಿ ಸಣ್ಣ ವಿಷಯಕ್ಕೂ ಸಿಟ್ಟು ಬರುವುದು, ಅತಿಯಾದ ಆತಂಕ ಅಥವಾ ಖಿನ್ನತೆಯ ಭಾವನೆ ಕಾಡುತ್ತದೆ.
ಮೆದುಳು ಆಯಾಸಗೊಂಡಾಗ ಕೆಲವೇ ಸೆಕೆಂಡುಗಳ ಕಾಲ ನಮಗೇ ತಿಳಿಯದಂತೆ ‘ಮೈಕ್ರೋ ಸ್ಲೀಪ್’ (ಕಣ್ಣು ತೆರೆದಿದ್ದರೂ ಮೆದುಳು ನಿದ್ರಿಸುವುದು) ಸಂಭವಿಸುತ್ತದೆ. ಇದು ಚಾಲನೆ ಮಾಡುವಾಗ ಅಥವಾ ಯಂತ್ರಗಳ ಬಳಿ ಕೆಲಸ ಮಾಡುವಾಗ ಪ್ರಾಣಾಪಾಯಕ್ಕೆ ಕಾರಣವಾಗಬಹುದು.
ನಾವು ಕಲಿತ ವಿಷಯಗಳು ನೆನಪಿನಲ್ಲಿ ಉಳಿಯಬೇಕೆಂದರೆ ನಿದ್ದೆ ಅತ್ಯಗತ್ಯ. ಜಾಗರಣೆ ಮಾಡುವುದರಿಂದ ಮೆದುಳು ಹೊಸ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಹಳೆಯದನ್ನು ನೆನಪಿಸಿಕೊಳ್ಳಲು ವಿಫಲವಾಗುತ್ತದೆ.








