ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆಗ್ರಹಿಸಿದ್ದರು. ಈ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪಾಪ ಕುಮಾರಸ್ವಾಮಿ ಅವರ ಅಸೂಯೆಗೂ ಮದ್ದಿಲ್ಲ ಹೊಟ್ಟೆಕಿಚ್ಚಿಗೂ ಮದ್ದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ರಾಜೀನಾಮೆ ನೀಡಬೇಕಂಬ ಎಚ್ ಡಿ ಕುಮಾರಸ್ವಾಮಿ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪಾಪ ಕುಮಾರಸ್ವಾಮಿ ಕಿಂಗ್ ಮೇಕರ್ ಆಗಲು ಹೊರಟಿದ್ದರು. ಈಗ ನನ್ನ ಅಧ್ಯಕ್ಷತೆಯಲ್ಲಿ ನಮ್ಮ 136 ಶಾಸಕರು ಗೆದ್ದಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ 19 ಸ್ಥಾನ ಬಂದಿವೆ. ಪಾಪ ಈಗ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದರು.
ಅಸೂಯೆಗೂ ಮದ್ದಿಲ್ಲ ಹೊಟ್ಟೆಕಿಚ್ಚಿಗೂ ಮದ್ದಿಲ್ಲ. ಕುಮಾರಸ್ವಾಮಿ ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾನು ರಾಜೀನಾಮೆ ಕೊಡಬೇಕು ಅಂತ ಅವನ ಆಸೆ. ಆ ತರ ಆಸೆ ಪಡುವವರನ್ನು ತಪ್ಪು ಅನ್ನೋಕೆ ಆಗುತ್ತದಾ? ಪಾಪ ಅವನ ಆಸೆ ಅದು ಎಂದು ವ್ಯಂಗ್ಯವಾಡಿದರು.