ಶಿವಮೊಗ್ಗ: ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ಸಾಗರದ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಕೋಟಿ ರೂಪಾಯಿ ವಿಶೇಷ ಅನುದಾನ ತರುವುದಾಗಿ ಗೋಪಾಲಕೃಷ್ಣ ಬೇಳೂರು ಅವರು ಭರವಸೆ ನೀಡಿದ್ದರು. ಅದರಂತೆ ಅಂದಿನ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 2 ಕೋಟಿ ರೂ. ಅನುದಾನ ನೀಡುವಂತೆ ಮನವಿ ಪತ್ರವನ್ನೂ ಸಲ್ಲಿಸಲಾಗಿತ್ತು ಎಂದು ಸಾಗರ ಟೌನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು ತಿಳಿಸಿದರು.
ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, “ಸಾಮಾನ್ಯವಾಗಿ ರಸ್ತೆ ಅಥವಾ ಚರಂಡಿ ಕಾಮಗಾರಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಆದರೆ ಹಣ ಬಿಡುಗಡೆಯಾಗುವ ಮುನ್ನವೇ ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಕೆಲಸವನ್ನು ಆರಂಭಿಸಲಾಗುತ್ತದೆ. ಅದೇ ರೀತಿ ಮಾರಿ ಜಾತ್ರೆಯ ಸಂದರ್ಭದಲ್ಲೂ ನಗರಸಭೆಯು 2 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ನಂಬಿಕೆಯ ಮೇಲೆ ನಡೆಸಿತ್ತು,” ಎಂದರು.
ಬಿಜೆಪಿ ವಿರುದ್ಧ ಆಕ್ರೋಶ
ಕಾಮಗಾರಿ ನಡೆದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, “2 ಕೋಟಿ ರೂಪಾಯಿ ಎಲ್ಲಿಂದ ಬಂದಿದೆ? ಯಾರು ತಂದಿದ್ದಾರೆ? ಇದೆಲ್ಲವೂ ಸುಳ್ಳು ಮತ್ತು ಬೋಗಸ್” ಎಂದು ಆರೋಪಿಸಿದ್ದರು. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸುರೇಶ್ ಬಾಬು, “ಅವರು ರಾಜಕೀಯವಾಗಿ ಯಾವುದಾದರೂ ಸಭೆಯಲ್ಲಿ ಮಾತನಾಡಿದ್ದರೆ ನಾವು ಸಹಜವಾಗಿ ತೆಗೆದುಕೊಳ್ಳುತ್ತಿದ್ದೆವು. ಆದರೆ ಪತ್ರಿಕಾಗೋಷ್ಠಿ ನಡೆಸಿ, ಹಣ ಬಂದೇ ಇಲ್ಲ, ಬರುವುದೂ ಇಲ್ಲ ಎಂದು ಸುಳ್ಳು ಆರೋಪ ಮಾಡಿದ್ದು ಸರಿಯಲ್ಲ,” ಎಂದು ಆಕ್ಷೇಪಿಸಿದರು.
ಅಧಿಕೃತ ಪತ್ರ ಬಿಡುಗಡೆ
ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಕಳೆದ ಒಂದು ವಾರದ ಹಿಂದಷ್ಟೇ ಎಸ್‌ಎಫ್‌ಸಿ (SFC) ಅಡಿಯಲ್ಲಿ 2 ಕೋಟಿ ರೂಪಾಯಿ ಹಣ ಮಂಜೂರಾಗಿರುವ ಬಗ್ಗೆ ಸರ್ಕಾರದ ಅಧಿಕೃತ ಪತ್ರ ಬಂದಿದ್ದು, ಅದನ್ನು ಈಗಾಗಲೇ ಎಲ್ಲರಿಗೂ ತಲುಪಿಸಲಾಗಿದೆ. ಸಾಗರದ ಇತಿಹಾಸದಲ್ಲೇ ಮಾರಿಕಾಂಬಾ ಜಾತ್ರೆಗೆ ಈ ರೀತಿಯಾಗಿ 2 ಕೋಟಿ ರೂಪಾಯಿ ಅನುದಾನ ಬಂದಿರುವುದು ಇದೇ ಮೊದಲು,” ಎಂದು ಸ್ಪಷ್ಟಪಡಿಸಿದರು.
”ಒಮ್ಮೆ ಒಂದು ಜಾತ್ರೆಗೆ ಸರ್ಕಾರದಿಂದ ಈ ರೀತಿ ಅನುದಾನ ಬಂದರೆ, ಅದು ಮುಂದಿನ ಪ್ರತಿ ಜಾತ್ರೆಗೂ ಅನುದಾನ ಬರುವ ಪ್ರಕ್ರಿಯೆಗೆ ನಾಂದಿ ಹಾಡುತ್ತದೆ ಮತ್ತು ಮುಂದಿನ ದಿನಗಳಲ್ಲಿ ಈ ಮೊತ್ತ ಇನ್ನೂ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಸಾಗರ ನಗರದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ತಂದಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಧನ್ಯವಾದಗಳು,” ಎಂದು ಸುರೇಶ್ ಬಾಬು ಹೇಳಿದರು.








