ಬೆಂಗಳೂರು : ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಂಪುಟ ದರ್ಜೆಯ ಸಚಿವರಿಗಾಗಿ ಬ್ರೇಕ್ ಫಾಸ್ಟ್ ಮೀಟಿಂಗ್ (ಉಪಹಾರ ಕೂಟ) ಆಯೋಜಿಸಿದ್ದು, ಈ ಸಭೆಯು ತೀವ್ರ ರಾಜಕೀಯ ಮಹತ್ವ ಪಡೆದುಕೊಂಡಿದೆ. ಈ ಸಭೆಯ ಬಳಿಕ ಸಿಎಂ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ರಾಜಕೀಯದಲ್ಲಿ ಇಂತಹ ಮಹತ್ತರ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ವಲಯ ಮತ್ತು ಬೆಂಬಲಿಗರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ನೀಡುವವರೆಗೂ ಯಾವುದೇ ಆಟ ಮುಗಿದಿಲ್ಲ. ಹಾಗಾಗಿ ಯಾರೂ ಕೂಡ ಯಾವುದೇ ರೀತಿಯ ಗಡಿಬಿಡಿಯ ಅಥವಾ ದುಡುಕಿನ ಹೇಳಿಕೆಗಳನ್ನು ನೀಡಬಾರದು ಎಂದು ತಮ್ಮ ಬೆಂಬಲಿಗರಿಗೆ ಖಡಕ್ ಆಗಿ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಶಾಸಕರಿಗೂ ಸ್ಪಷ್ಟ ಸಂದೇಶ ರವಾನಿಸಿರುವ ಡಿ.ಕೆ. ಶಿವಕುಮಾರ್, ಮಾಧ್ಯಮಗಳ ಮುಂದೆ ಅಥವಾ ಸಾರ್ವಜನಿಕವಾಗಿ ಆತುರದ ಪ್ರತಿಕ್ರಿಯೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ತರಬಾರದು ಎಂದು ಎಚ್ಚರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸಂಯಮ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಅವರು ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇನ್ನು ಹೈಕಮಾಂಡ್ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ, “ದೆಹಲಿ ನಾಯಕರು ಈ ವಿಷಯವಾಗಿ ನನ್ನ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರದ ಕುರಿತು ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೈಕಮಾಂಡ್ ನಾಯಕರು ಏನೇ ಚರ್ಚೆ ನಡೆಸಿದ್ದರೂ ಅದನ್ನು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರ ಜೊತೆಯಲ್ಲೇ ಮಾತನಾಡಿದ್ದಾರೆ” ಎಂದು ಆಪ್ತರ ಬಳಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸದ್ಯಕ್ಕೆ ಕುತೂಹಲದ ಚೆಂಡನ್ನು ಸಿಎಂ ಅಂಗಳದಲ್ಲೇ ಉಳಿಸಿದ್ದಾರೆ.








