ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ ಇಂದು ಮಧ್ಯಾಹ್ನ ರಾಜ್ಯಪಾಲರ ಭೇಟಿಗೆ ಈಗಾಗಲೇ ಸಮಯ ಕೋರಿದ್ದಾರೆ. ಆದರೆ, ರಾಜ್ಯಪಾಲರು ದಿಢೀರಾಗಿ ಇಂದೋರ್ಗೆ ತೆರಳಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯ ನಡುವೆಯೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲು ಅವಕಾಶ ಇದೆ ಎಂದೇ ಹೇಳಲಾಗುತ್ತಿದೆ.
ಹೌದು ರಾಜ್ಯಪಾಲರು ಕೇಂದ್ರ ಸ್ಥಾನದಲ್ಲಿ ಇಲ್ಲದಿದ್ದರೂ ಮುಖ್ಯಮಂತ್ರಿಗಳು ರಾಜೀನಾಮೆ ಪತ್ರವನ್ನು ಸಲ್ಲಿಸಲು ಸಂವಿಧಾನದಲ್ಲಿ ಅವಕಾಶವಿರುವುದು ಗೊತ್ತಾಗಿದೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಭವನದ (ಲೋಕಭವನ) ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲು ಗಂಭೀರ ಚಿಂತನೆ ನಡೆಸಿದ್ದಾರೆ.
ಸಾಂವಿಧಾನಿಕ ನಿಯಮಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರವನ್ನು ವಿಶೇಷ ಕಾರ್ಯದರ್ಶಿಗೆ ಸಲ್ಲಿಸಿದರೆ, ಅವರು ರಾಜ್ಯಪಾಲರು ಇಂದೋರ್ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ ಅದನ್ನು ಅವರ ವಿವೇಚನೆಗೆ ಕಳುಹಿಸಿಕೊಡಲಿದ್ದಾರೆ. ಆದರೆ, ಕೇವಲ ಪತ್ರ ತಲುಪಿದ ತಕ್ಷಣ ರಾಜೀನಾಮೆ ಅಂಗೀಕಾರವಾಗುವುದಿಲ್ಲ. ರಾಜೀನಾಮೆ ಅಂಗೀಕರಿಸುವ ಮುನ್ನ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಖುದ್ದಾಗಿ ಲೋಕಭವನಕ್ಕೆ ಕರೆಸಿ, ಮುಖಾಮುಖಿ ಮಾತುಕತೆ ನಡೆಸಿದ ಬಳಿಕವಷ್ಟೇ ಅದಕ್ಕೆ ಅಧಿಕೃತ ಮುದ್ರೆ ಒತ್ತಲಿದ್ದಾರೆ.








