ಮೈಸೂರು : ರಾಜ್ಯದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದು, ಮೂರು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲಿನ ಅಬ್ಬರಕ್ಕೆ ಜಿಲ್ಲೆಯ ಹೆಚ್.ಡಿ.ಕೋಟೆ ಹಾಗೂ ಹುಣಸೂರು ತಾಲೂಕುಗಳಲ್ಲಿ ಪುರುಷ, ಮಹಿಳೆ ಹಾಗೂ ಹಸುವೊಂದು ಮೃತಪಟ್ಟಿದೆ.ಕಳೆ ಕೀಳಲು ಹೊಲಕ್ಕೆ ತೆರಳಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಹೊಸಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಹೊಸಪುರ ಗ್ರಾಮದ ಯಶೋಧಮ್ಮ (65) ಮೃತ ದುರ್ದೈವಿ.
ಗ್ರಾಮದ ಬಸಪ್ಪ ಎಂಬವರ ಜಮೀನಿನಲ್ಲಿ ಬೀನ್ಸ್ ಬೆಳೆಯ ಕಳೆ ಕೆಲಸಕ್ಕೆ ಬೆಳಗ್ಗೆ ಯಶೋಧಮ್ಮ ಸೇರಿದಂತೆ 6 ಮಹಿಳೆಯರು ತೆರಳಿದ್ದರು. ಸಂಜೆಯಾಗುತ್ತಿದ್ದಂತೆ ಗುಡುಗು ಸಿಡಿಲು ಸಹಿತ ಜೋರು ಮಳೆ ಆರಂಭವಾಗಿದ್ದು, ರಕ್ಷಣೆಗಾಗಿ ಯಶೋಧಮ್ಮ ಜಮೀನಿನ ಪಕ್ಕದಲ್ಲಿದ್ದ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದರು.
ಈ ವೇಳೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತರಾಗಿದ್ದಾರೆ. ಗ್ರಾಮಸ್ಥರು ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾನುವಾರು ಮೇಯಿಸಲು ಕಾಡಂಚಿನ ಗ್ರಾಮಕ್ಕೆ ತೆರಳಿದ್ದ ಅಪ್ಪಯ್ಯ ಎನ್ನುವವರು, ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಾಳದಹಾಡಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಂತರಸಂತೆ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಸಿಡಿಲಬ್ಬರಕ್ಕೆ ಹೆಚ್.ಡಿ.ಕೋಟೆ ತಾಲೂಕಿನ ನೂರಲಕುಪ್ಪೆ ಎ ಗ್ರಾಮದಲ್ಲಿ ಹಸುವೊಂದು ಮೃತಪಟ್ಟಿದೆ.
ಇನ್ನೊಂದೆಡೆ, ಬಳ್ಳಾರಿ ಜಿಲ್ಲೆಯ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು. ಮೃತರನ್ನು ಗ್ರಾಮದ ಕೊರಿ ಗಾದಿಲಿಂಗಪ್ಪ (32) ಎಂದು ಗುರುತಿಸಲಾಗಿದೆ. ಚಿಕ್ಕು ಹಣ್ಣು ಹರಿಯಲು ಗಾದಿಲಿಂಗಪ್ಪ ಹೊಲಕ್ಕೆ ತೆರಳಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರಿಗೆ ಪತ್ನಿ ಮಂಜಮ್ಮ, ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಇದೆ. ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.








