ಚಾಮರಾಜನಗರ: ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ‘ಕಾವೇರಿ 2.0’ ಪೋರ್ಟಲ್ ಮೂಲಕ ಹೊಸ ಇತಿಹಾಸ ಬರೆದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರದ ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ಕಾಗದರಹಿತ (Paperless) ನೋಂದಣಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಎಂ.ಪಿ. ಮುಲ್ಲೈ ಮುಹಿಲನ್ ಅವರು ಗುರುವಾರ ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಈ ನೂತನ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಸಾಂಪ್ರದಾಯಿಕ ಕಾಗದ ಆಧಾರಿತ ನೋಂದಣಿ ವ್ಯವಸ್ಥೆಯಿಂದ ಈಗ ಸಂಪೂರ್ಣ ಡಿಜಿಟಲ್ ಮತ್ತು ಕಾಗದರಹಿತ ವ್ಯವಸ್ಥೆಗೆ ಬದಲಾವಣೆ ತರಲಾಗಿದೆ. ಡಿಜಿಟಲ್ ದಾಖಲೆಗಳು ಎನ್‌ಕ್ರಿಪ್ಶನ್, ಆಡಿಟ್ ಟ್ರೇಲ್ ಮತ್ತು ಹ್ಯಾಶ್ ಆಧಾರಿತ ಪರಿಶೀಲನೆಯ ಮೂಲಕ ಅತ್ಯಂತ ಸುರಕ್ಷಿತವಾಗಿರುತ್ತವೆ. ಒಮ್ಮೆ ಡಿಜಿಟಲ್ ಸಹಿ ಮಾಡಿದ ನಂತರ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ.
ಈ ಪ್ರಕ್ರಿಯೆಯು ಸರಳ ಮತ್ತು ಪಾರದರ್ಶಕವಾಗಿದ್ದು, ಸಾರ್ವಜನಿಕರ ಸಮಯವನ್ನು ಉಳಿಸುತ್ತದೆ. ಎಲ್ಲಾ ಪ್ರಕ್ರಿಯೆಗಳು ಆಧಾರ್ ಆಧಾರಿತವಾಗಿ ನಡೆಯಲಿದ್ದು, ಸಾರ್ವಜನಿಕರು ನೇರವಾಗಿ ತಮ್ಮ ಆಸ್ತಿಗಳನ್ನು ನೋಂದಣಿ ಮಾಡಲು ಅವಕಾಶವಿದೆ.
ಮುಂದಿನ ಯೋಜನೆ:
ಆಯುಕ್ತ ಮುಲ್ಲೈ ಮುಹಿಲನ್ಅವರು ಮಾತನಾಡಿ, “ಈ ವ್ಯವಸ್ಥೆಯು ಆಸ್ತಿ ವ್ಯವಹಾರಗಳಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಮುಂಬರುವ ಎರಡು-ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಕಾಗದರಹಿತ ನೋಂದಣಿ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು” ಎಂದು ತಿಳಿಸಿದರು.








