ಶಿವಮೊಗ್ಗ: ಮುಂಬರುವ ಮೇ 1ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ಕಳೆಗಟ್ಟಿದ್ದು, ಅಭ್ಯರ್ಥಿಗಳು ಮತ್ತು ಬೆಂಬಲಿಗರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾಗರ ತಾಲೂಕಿನ ಶಿಕ್ಷಕರ ಸಮುದಾಯದಲ್ಲಿ ಈ ಬಾರಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ ಹೆಚ್ಚಿನ ಗಮನ ಸೆಳೆಯುತ್ತಿದೆ.
ಅನುಭವ ಮತ್ತು ಯುವ ಶಕ್ತಿಯ ಸಂಗಮ:
ಈ ಕುರಿತು ಮಾತನಾಡಿರುವ ಶಿಕ್ಷಕರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದಂತ ಹುವ್ವಪ್ಪ “ನಮ್ಮ ತಂಡವು ಅನುಭವಸ್ಥ ಹಿರಿಯರು ಮತ್ತು ಉತ್ಸಾಹಿ ಯುವ ಶಿಕ್ಷಕರನ್ನೊಳಗೊಂಡ ಸಮರ್ಥ ತಂಡವಾಗಿದೆ. ಸಮಾನ ಮನಸ್ಕರೆಲ್ಲರೂ ಸೇರಿ ಶಿಕ್ಷಕರ ಹಿತರಕ್ಷಣೆಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಕಲಾವಿದರ ಸಾಥ್:
ವಿಶೇಷವಾಗಿ ಈ ತಂಡಕ್ಕೆ ಸಾಗರ ತಾಲೂಕಿನ ಸಾಂಸ್ಕೃತಿಕ ವಲಯದಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ‘ಕಲಾ ಸಿಂಚನ’ ಶಿಕ್ಷಕರ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಹಾಗೂ ಜನಪದ ತಂಡದ ಸದಸ್ಯರು ಸ್ವಾಭಿಮಾನಿ ಶಿಕ್ಷಕರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.
ಸೇವೆಯ ಸಂಕಲ್ಪ:
ತಾಲೂಕಿನಾದ್ಯಂತ ಇರುವ ಎಲ್ಲಾ ಶಿಕ್ಷಕ ಬಂಧುಗಳು ತಮ್ಮ ಅಮೂಲ್ಯವಾದ ಮತವನ್ನು ‘ಸ್ವಾಭಿಮಾನಿ ಶಿಕ್ಷಕರ ತಂಡ’ಕ್ಕೆ ನೀಡುವ ಮೂಲಕ ಅಭ್ಯರ್ಥಿಗಳನ್ನು ಭಾರಿ ಬಹುಮತದಿಂದ ಜಯಶೀಲರನ್ನಾಗಿ ಮಾಡಬೇಕು. ಆ ಮೂಲಕ ತಾಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ನಿರಂತರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದ್ದಾರೆ.








