ಬೆಂಗಳೂರು: ಕೌಟುಂಬಿಕ ಕಲಹದ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ತಾಯಿಯ ಜೊತೆಗಿರುವ ಅಪ್ರಾಪ್ತ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವುದು ತಂದೆಯ ಕರ್ತವ್ಯ ಎಂದು ಸ್ಪಷ್ಟಪಡಿಸಿದೆ. ಶಿಕ್ಷಣದ ವಿಚಾರದಲ್ಲಿ ಯಾವುದೇ ಹಣಕಾಸಿನ ಮಿತಿ ಇರಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ದಂಪತಿಯು 2005 ರಲ್ಲಿ ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿದ್ದರು. ಇವರಿಗೆ 17 ಮತ್ತು 12 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ದಂಪತಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪತ್ನಿ 2022 ರಲ್ಲಿ ಭಾರತಕ್ಕೆ ಮರಳಿ ತವರು ಮನೆ ಸೇರಿದ್ದರು. ಪತ್ನಿಯು ಮಕ್ಕಳ ಪಾಲನೆ, ಶಿಕ್ಷಣ ಮತ್ತು ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮಕ್ಕಳ ಶಾಲಾ ಶುಲ್ಕ ಅಥವಾ ಶಿಕ್ಷಣ ಸಂಸ್ಥೆಗಳು ಕೇಳುವ ಸಂಪೂರ್ಣ ವೆಚ್ಚವನ್ನು ತಂದೆಯೇ ನೇರವಾಗಿ ಪಾವತಿಸಬೇಕು. ಇದಕ್ಕೆ ಯಾವುದೇ ಹಣಕಾಸಿನ ಮಿತಿ ಇರುವಂತಿಲ್ಲ. ಒಂದು ವೇಳೆ ತಾಯಿ ಈಗಾಗಲೇ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ ನಂತರ ತಂದೆಯು ಆ ಹಣವನ್ನು ಪತ್ನಿಗೆ ಮರುಪಾವತಿಸಬೇಕು ಎಂದು ಹೇಳಿದೆ.
ಪಠ್ಯೇತರ ಚಟುವಟಿಕೆಗಳು, ಪುಸ್ತಕಗಳು, ಸಮವಸ್ತ್ರ ಮತ್ತು ವೈದ್ಯಕೀಯ ಅಗತ್ಯಗಳಿಗೆ ತಗಲುವ ವೆಚ್ಚವನ್ನೂ ತಂದೆಯೇ ನೀಡಬೇಕು. ಪತಿಯು ತನ್ನಿಬ್ಬರು ಮಕ್ಕಳಿಗೆ ತಲಾ ₹15 ಸಾವಿರ ಮತ್ತು ಪತ್ನಿಗೆ ₹40 ಸಾವಿರದಂತೆ ಪ್ರತಿ ತಿಂಗಳು ಜೀವನಾಂಶ ಪಾವತಿಸಬೇಕು. ಕಾನೂನು ಹೋರಾಟದ ವೆಚ್ಚವಾಗಿ ₹25 ಸಾವಿರ ಪಾವತಿಸುವಂತೆ ನೀಡಲಾಗಿದ್ದ ಈ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪತ್ನಿಯು ಉನ್ನತ ಪದವೀಧರೆಯಾಗಿದ್ದು, ಸ್ವಯಂ ಸಂಪಾದನೆಯ ಶಕ್ತಿ ಹೊಂದಿದ್ದಾರೆ ಎಂಬ ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಆದೇಶ ನೀಡಿದೆ.








