ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ದರ್ಜೆಯ ಖಾತೆ ಹಂಚಿಕೆ ಅಸಮಾಧಾನ ತೀವ್ರಗೊಂಡಿದ್ದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ನಿರ್ಧಾರ ಮತ್ತು ಅವರ ಮನವೊಲಿಕೆಗೆ ಹೈಕಮಾಂಡ್ ನಡೆಸುತ್ತಿರುವ ಕಸರತ್ತು ಈಗ ತೀವ್ರ ಕುತೂಹಲ ಕೆರಳಿಸಿದೆ. “ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡಬೇಕು, ಇಲ್ಲದಿದ್ದರೆ ನಾನು ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ” ಎಂದು ಪಟ್ಟು ಹಿಡಿದು ನಿನ್ನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಅಖಾಡಕ್ಕಿಳಿದಿದ್ದು, ಅಸಮಾಧಾನಿತ ಹಿರಿಯ ನಾಯಕನ ಮನವೊಲಿಸಲು ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ಸುರ್ಜೆವಾಲಾ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಬದಲಿಗೆ ಅತ್ಯಂತ ಪ್ರಮುಖವಾದ ‘ಜಲ ಸಂಪನ್ಮೂಲ’ ಖಾತೆಯನ್ನು ವಹಿಸಿಕೊಳ್ಳುವಂತೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 25 ನಿಮಿಷಗಳ ಕಾಲ ನಡೆದ ಈ ಹೈವೋಲ್ಟೇಜ್ ಸಭೆಯಲ್ಲಿ ಸುರ್ಜೆವಾಲಾ ಅವರು ರಾಮಲಿಂಗಾರೆಡ್ಡಿ ಅವರ ಸೀನಿಯಾರಿಟಿಯನ್ನು ಗೌರವಿಸುವುದಾಗಿ ಭರವಸೆ ನೀಡಿದ್ದಾರೆ. ಕೇವಲ ಜಲ ಸಂಪನ್ಮೂಲ ಖಾತೆ ಮಾತ್ರವಲ್ಲದೆ, ಅದರ ಜೊತೆಗೆ ಮತ್ತೊಂದು ಪ್ರಭಾವಿ ಹೆಚ್ಚುವರಿ ಖಾತೆಯನ್ನು ನೀಡುವುದಾಗಿಯೂ ಸುರ್ಜೆವಾಲಾ ಮುಕ್ತ ಆಫರ್ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಮತ್ತು ತಕ್ಷಣವೇ ರಾಜೀನಾಮೆ ಪತ್ರವನ್ನು ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಆದರೆ, ರಾಮಲಿಂಗಾರೆಡ್ಡಿ ಅವರು ಹೈಕಮಾಂಡ್ ನೀಡಿದ ಈ ಜಲ ಸಂಪನ್ಮೂಲ ಖಾತೆಯ ಆಫರ್ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದ ರಾಜಕಾರಣದಲ್ಲಿ ದಶಕಗಳ ಕಾಲ ಹಿಡಿತ ಸಾಧಿಸಿರುವ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕು ಎಂಬ ತಮ್ಮ ಹಠದಿಂದ ಅವರು ಹಿಂದೆ ಸರಿದಿಲ್ಲ ಎನ್ನಲಾಗಿದೆ. ಈ ಹಿಂದೆಯೂ ನಗರದ ಜವಾಬ್ದಾರಿ ನಿಭಾಯಿಸಿದ ಅನುಭವ ಇರುವುದರಿಂದ ತಮಗೆ ಅದೇ ಖಾತೆ ಸೂಕ್ತ ಎಂಬುದು ಅವರ ವಾದವಾಗಿದೆ.
ಸದ್ಯ ಸುರ್ಜೆವಾಲಾ ಅವರೊಂದಿಗಿನ ಮಾತುಕತೆಯ ನಂತರವೂ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಸಂಪೂರ್ಣವಾಗಿ ತಣ್ಣಗಾದ ಲಕ್ಷಣಗಳು ಕಾಣಿಸುತ್ತಿಲ್ಲ. ಹೈಕಮಾಂಡ್ನ ಸಂಧಾನ ಸೂತ್ರಕ್ಕೆ ಅವರು ತಕ್ಷಣ ಒಪ್ಪಿಗೆ ಸೂಚಿಸದೆ, ತಮ್ಮ ನಿಲುವಿಗೆ ಬದ್ಧರಾಗಿರುವುದಾಗಿ ಆಪ್ತರ ವಲಯದಲ್ಲಿ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ತಲೆನೋವು ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಈ ಖಾತೆ ತಗಾದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.








