ಬೆಂಗಳೂರು: ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ವಿವಾಹಿತ ಮಹಿಳೆಯರ ಆದಾಯ ಪ್ರಮಾಣ ಪತ್ರದ ವಿಷಯದಲ್ಲಿ ನಡೆಯುತ್ತಿದ್ದ ಸುದೀರ್ಘ ಕಾನೂನು ಹೋರಾಟಕ್ಕೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (KAT) ಗುರುವಾರ ಮಹತ್ವದ ತೀರ್ಪು ನೀಡುವ ಮೂಲಕ ತೆರೆ ಎಳೆದಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 15,000 ಹೈಸ್ಕೂಲ್ (6-8) ಶಿಕ್ಷಕರ ನೇಮಕಾತಿಗೆ ಆದೇಶಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳು ಪತಿಯ ಆದಾಯ ಅಥವಾ ಪಾಲಕರ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಬಗ್ಗೆ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟತೆ ಇರಲಿಲ್ಲ.ಸುಮಾರು 480 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯು ಈ ಗೊಂದಲದಿಂದಾಗಿ ಸ್ಥಗಿತಗೊಂಡಿತ್ತು. ಪಾಲಕರ ಆದಾಯ ಪತ್ರ ಸಲ್ಲಿಸಿದವರನ್ನು ನೇಮಕಾತಿಗೆ ಪರಿಗಣಿಸಿರಲಿಲ್ಲ.
ನ್ಯಾಯಾಲಯದ ನಿರ್ದೇಶನ
ಸರ್ಕಾರದ ಈ ನಡೆಯನ್ನು ಕೆಎಟಿ ತರಾಟೆಗೆ ತೆಗೆದುಕೊಂಡಿದೆ. ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟತೆ ನೀಡದ ಕಾರಣ ಇದು ಸರ್ಕಾರದ ತಪ್ಪಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಪತಿಯ ಆದಾಯ ಪ್ರಮಾಣ ಪತ್ರ ನೀಡಿದ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಮತ್ತು ಸರ್ಕಾರದ ತಪ್ಪಿನಿಂದಾಗಿ ಪಾಲಕರ ಆದಾಯ ಪ್ರಮಾಣ ಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನೂ ಸಹ ನೇಮಕಾತಿಗೆ ಪರಿಗಣಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಐದು ವರ್ಷಗಳ ಹೋರಾಟಕ್ಕೆ ಜಯ:
ಕಳೆದ ಐದು ವರ್ಷಗಳಿಂದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್, ಕೆಎಟಿ (KAT) ಸೂಕ್ತ ಪ್ರಾಧಿಕಾರ ಎಂದು ಹೇಳಿದ ಹಿನ್ನೆಲೆಯಲ್ಲಿ, ಕಳೆದ ಆರು ತಿಂಗಳಿಂದ ಬೆಂಗಳೂರಿನ ಕೆಎಟಿ ಮುಖ್ಯ ಪೀಠದಲ್ಲಿ ವಿಚಾರಣೆ ನಡೆದು ಈಗ ಈ ಮಹತ್ವದ ತೀರ್ಪು ಪ್ರಕಟವಾಗಿದೆ. ಇದರಿಂದಾಗಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ನೂರಾರು ಶಿಕ್ಷಕ ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.








