ಮುಂಬೈ: ಸಂಗೀತ ಲೋಕದ ದೈತ್ಯ ಸಂಸ್ಥೆ ‘ಟಿ-ಸೀರೀಸ್’ (T-Series) ಸಂಸ್ಥಾಪಕ ದಿವಂಗತ ಗುಲ್ಶನ್ ಕುಮಾರ್ ಅವರ ಕಿರಿಯ ಸಹೋದರ ದರ್ಶನ್ ಕುಮಾರ್ ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.
ದರ್ಶನ್ ಕುಮಾರ್ ಅವರು ಟಿ-ಸೀರೀಸ್ ಸಂಸ್ಥೆಯ ಆರಂಭಿಕ ದಿನಗಳಲ್ಲಿ ತಮ್ಮ ಸಹೋದರ ಗುಲ್ಶನ್ ಕುಮಾರ್ ಮತ್ತು ಕಿಶನ್ ಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ತೆರೆಯ ಹಿಂದೆ ಇದ್ದುಕೊಂಡು ಸಂಸ್ಥೆಯ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನಕ್ಕೆ ಬಾಲಿವುಡ್‌ನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಖ್ಯಾತ ಗಾಯಕ ಮಿಕಾ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಕುಮಾರ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡು ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.








