ವಿಜಯನಗರ : ವಿಶ್ವವಿಖ್ಯಾತ ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಹೋಂ ಸ್ಟೇ, ವಸತಿ ಗೃಹ, ಗೆಸ್ಟ್ ಹೌಸ್ ಮೇಲೆ ವಿಜಯನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೋಮವಾರ ದಾಳಿ ನಡೆಸಿ, ತಕ್ಷಣವೇ ಬಂದ್ ಮಾಡುವಂತೆ ಸೂಚಿಸಿದೆ.
ಹಂಪಿ, ಕಮಲಾಪುರ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಯ ಇತರೆ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆಯಡಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರವು ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್ ಅವರ ನೇತೃತ್ವದಲ್ಲಿ ಹಂಪಿ ಮತ್ತು ಕಮಲಾಪುರ ಭಾಗದ ಹೋಂ ಸ್ಟೇ, ವಸತಿ ಗೃಹ, ಗೆಸ್ಟ್ ಹೌಸ್ಗಳ ಮೇಲೆ ದಾಳಿ ನಡೆಯಿತು.
ಹಂಪಿಯ ಪಾವಿತ್ರ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆಯದೆ ಹೋಂ ಸ್ಟೇ ನಡೆಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಲ್ಲದೆ, ಪ್ರವಾಸಿಗರ ಭದ್ರತೆಯ ಬಗ್ಗೆಯೂ ಆತಂಕವಿರುತ್ತದೆ. ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದ್ದು, ನಿಯಮ ಮೀರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಈ ದಿಢೀರ್ ದಾಳಿಯಿಂದಾಗಿ ಹಂಪಿ ಭಾಗದ ವಸತಿ ಉದ್ದಿಮೆದಾರರಲ್ಲಿ ಆತಂಕ ಮನೆ ಮಾಡಿದ್ದು, ಹಲವು ದಿನಗಳಿಂದ ನೋಂದಣಿ ಪ್ರಕ್ರಿಯೆ ಬಾಕಿ ಉಳಿಸಿಕೊಂಡಿದ್ದ ಮಾಲೀಕರು ಈಗ ಪರವಾನಗಿ ಪಡೆಯಲು ಮುಂದಾಗಿದ್ದಾರೆ. ಜಿಲ್ಲಾಡಳಿತದ ಈ ಕ್ರಮದಿಂದಾಗಿ ಹಂಪಿಯಲ್ಲಿ ಪ್ರವಾಸೋದ್ಯಮ ವ್ಯವಸ್ಥಿತವಾಗಿ ನಡೆಯಲು ಹಾದಿ ಸುಗಮವಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.








