ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಆರ್ಥಿಕ ಇಲಾಖೆಯು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇನ್ಮುಂದೆ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯ (KAMS) ಮೊಬೈಲ್ ಆಪ್ ಮೂಲಕ ಬೆಳಗ್ಗೆ 10:00 ಗಂಟೆಯೊಳಗೆ ತಮ್ಮ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಸರ್ಕಾರ ಆದೇಶಿಸಿದೆ.
ಇದರೊಂದಿಗೆ, ಪಾರದರ್ಶಕ ಆಡಳಿತ ಮತ್ತು ನಿಖರವಾದ ಸ್ಥಳ ಪರಿಶೀಲನೆಗಾಗಿ ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ನಿರ್ದೇಶಾಂಕಗಳನ್ನು (Geo Coordinates) ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಏನಿದು ಹೊಸ ನಿಯಮ? ಪ್ರಮುಖ ಅಂಶಗಳು ಇಲ್ಲಿವೆ:
ಬೆಳಗ್ಗೆ 10 ಗಂಟೆಗೆ ಹಾಜರಾತಿ ಕಡ್ಡಾಯ: ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿಯನ್ನು HRMS ನ ಕರ್ತವ್ಯ (KAMS) ಆಪ್ ಮೂಲಕವೇ ದಾಖಲಿಸಬೇಕು.
ಕಚೇರಿಗಳ ಜಿಯೋ ಟ್ಯಾಗಿಂಗ್: ಪ್ರತಿಯೊಂದು ಸರ್ಕಾರಿ ಕಚೇರಿಯ ನಿಖರವಾದ ರೇಖಾಂಶ ಮತ್ತು ಅಕ್ಷಾಂಶಗಳನ್ನು (Geo-Coordinates) HRMS-ESS ಆಪ್ ಮೂಲಕ ಸೆರೆಹಿಡಿಯಲು ಸೂಚಿಸಲಾಗಿದೆ.
ಅಧಿಕಾರಿಗಳ ನೇಮಕ: ಜಿಯೋ ನಿರ್ದೇಶಾಂಕಗಳನ್ನು ದಾಖಲಿಸಲು ಪ್ರತಿಯೊಂದು ಕಚೇರಿಯಿಂದ ಒಬ್ಬ ಗ್ರೂಪ್ ‘ಬಿ’ ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ನೌಕರರ ರೇಖಾಚಿತ್ರ ಸಂಗ್ರಹಣೆಗಾಗಿ ನಾಮನಿರ್ದೇಶನ ಮಾಡಬೇಕು.
ಜಿಯೋ ಟ್ಯಾಗಿಂಗ್ ಮಾಡುವ ವಿಧಾನ ಹೇಗೆ?
1. ಅನುಮೋದಕರು (Approver / DDO) ಮಾಡಬೇಕಾದ ಕೆಲಸ:
ಮೊದಲು HRMS 2.0 Web Portal ಗೆ ಲಾಗಿನ್ ಆಗಿ.
ನಿಮ್ಮ ಕಚೇರಿಯನ್ನು ಆಯ್ಕೆ ಮಾಡಿ, ವಿಳಾಸದ ವಿವರಗಳನ್ನು ನವೀಕರಿಸಿ.
ಜಿಯೋ ನಿರ್ದೇಶಾಂಕ ಸಂಗ್ರಹಣೆಗಾಗಿ ಒಬ್ಬ ಅಧಿಕಾರಿಯನ್ನು ನಾಮನಿರ್ದೇಶನ (Nominate) ಮಾಡಿ ವಿವರಗಳನ್ನು ಉಳಿಸಿ (Save).
2. ನಾಮನಿರ್ದೇಶಿತ ಅಧಿಕಾರಿ (Nominated Employee) ಮಾಡಬೇಕಾದ ಕೆಲಸ:
ತಮ್ಮ ಮೊಬೈಲ್‌ನಲ್ಲಿ HRMS2-ESS ಆಪ್‌ಗೆ ಲಾಗಿನ್ ಆಗಬೇಕು.
‘My Profile’ ಗೆ ಹೋಗಿ, ‘Capture My Office Location’ ಕ್ಲಿಕ್ ಮಾಡಬೇಕು.
ಕಡ್ಡಾಯವಾಗಿ ಕಚೇರಿಯ ಆವರಣದಲ್ಲೇ ಭೌತಿಕವಾಗಿ ಹಾಜರಿದ್ದು, ಲೊಕೇಶನ್ ಆನ್ ಮಾಡಿ ‘Submit’ ನೀಡಬೇಕು.
ತಾಂತ್ರಿಕ ತೊಂದರೆಗಳಿದ್ದರೆ ಸಹಾಯವಾಣಿ ಸಂಪರ್ಕಿಸಿ:
ಹಾಜರಾತಿ ಅಥವಾ ಜಿಯೋ ಟ್ಯಾಗಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಸಿಬ್ಬಂದಿಗಳು CEG Helpdesk ಅನ್ನು ಸಂಪರ್ಕಿಸಬಹುದು.
ಮೊಬೈಲ್ ಸಂಖ್ಯೆ: 8277078123
ಇಮೇಲ್ ಐಡಿ: KAMS.helpdesk@karnataka.gov.in
ರಾಜ್ಯ ಸರ್ಕಾರದ ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಗೈರುಹಾಜರಿಗೆ ಬ್ರೇಕ್ ಬೀಳಲಿದ್ದು, ಸಾರ್ವಜನಿಕ ಸೇವೆಗಳು ಮತ್ತಷ್ಟು ವೇಗವಾಗಿ ಸಿಗುವ ನಿರೀಕ್ಷೆಯಿದೆ.









