ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಇದೀಗ ದೊಡ್ಡ ಮಟ್ಟದ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಯೋಜನೆಯ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸುವ ವೇಳೆ ಸಾವಿರಾರು ಅನರ್ಹರ ಹೆಸರುಗಳು ಬೆಳಕಿಗೆ ಬಂದಿದ್ದು, ಸರ್ಕಾರವು ಪಟ್ಟಿಯಿಂದ ಅವರನ್ನು ಕೈಬಿಡುವ ಪ್ರಕ್ರಿಯೆ ಆರಂಭಿಸಿದೆ.
ಪ್ರಸ್ತುತ 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದ ತಪಾಸಣೆಯಲ್ಲಿ ಒಟ್ಟು 1,12,092ಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಆತಂಕಕಾರಿ ಸಂಗತಿಯೆಂದರೆ, 55,232 ಮೃತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.
ಇದರ ಜೊತೆಗೆ, ಆದಾಯ ತೆರಿಗೆ (ಐಟಿ) ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸುತ್ತಿರುವ 56,860 ಮಹಿಳೆಯರು ಕೂಡ ಯೋಜನೆಯ ಅರ್ಹತಾ ಮಾನದಂಡಗಳಿಗೆ ವಿರುದ್ಧವಾಗಿರುವುದರಿಂದ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಹೆಸರುಗಳು ಕೈಬಿಟ್ಟಿವೆ?
ಪರಿಶೀಲನೆ ವೇಳೆ ವಿವಿಧ ಜಿಲ್ಲೆಗಳಲ್ಲಿ ಅನರ್ಹ ಫಲಾನುಭವಿಗಳ ಸಂಖ್ಯೆ ಹೀಗಿದೆ:
ಮೈಸೂರು ಜಿಲ್ಲೆ – 18,000
ಚಿತ್ರದುರ್ಗ ಜಿಲ್ಲೆ – 12,637
ದಕ್ಷಿಣ ಕನ್ನಡ ಜಿಲ್ಲೆ – 9,000
ಕೊಪ್ಪಳ ಜಿಲ್ಲೆ – 7,200
ಉತ್ತರ ಕನ್ನಡ ಜಿಲ್ಲೆ – 6,380
ಹಾವೇರಿ ಜಿಲ್ಲೆ – 6,346
ದಾವಣಗೆರೆ ಜಿಲ್ಲೆ – 4,000
ಉಡುಪಿ ಜಿಲ್ಲೆ – 2,800
ಇತರೆ ಜಿಲ್ಲೆಗಳಲ್ಲಿಯೂ ಇದೇ ರೀತಿಯ ಪರಿಶೀಲನೆ ಮುಂದುವರಿದಿದ್ದು, ಅನರ್ಹರನ್ನು ಗುರುತಿಸಿ ಪಟ್ಟಿಯಿಂದ ಹೊರಗಿಡುವ ಕಾರ್ಯ ಚುರುಕುಗೊಂಡಿದೆ.
ಗೃಹಲಕ್ಷ್ಮಿ ಯೋಜನೆ, ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ, ಅನರ್ಹ ಫಲಾನುಭವಿಗಳು, ಮೃತರ ಖಾತೆಗೆ ಹಣ ಜಮೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ವಿಚಾರಗಳು ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.








