ನವದೆಹಲಿ : ಆದಾಯ ತೆರಿಗೆ ಪಾವತಿದಾರರಿಗೆ ಪ್ರಮುಖ ಸೂಚನೆ ಬಂದಿದೆ. 2026-27ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಮೊದಲ ಮುಂಗಡ ತೆರಿಗೆ (Advance Tax) ಪಾವತಿಸಲು ಜೂನ್ 15 ಕೊನೆಯ ದಿನವಾಗಿದೆ. ವರ್ಷಕ್ಕೆ 10,000 ರೂ.ಗಿಂತ ಹೆಚ್ಚಿನ ಅಂದಾಜು ತೆರಿಗೆ ಹೊಣೆಗಾರಿಕೆ ಹೊಂದಿರುವವರು ಈ ದಿನಾಂಕದೊಳಗೆ ತಮ್ಮ ಒಟ್ಟು ಮುಂಗಡ ತೆರಿಗೆಯ ಶೇಕಡಾ 15 ರಷ್ಟನ್ನು ಪಾವತಿಸಬೇಕಾಗುತ್ತದೆ.
ವಿಶೇಷವೆಂದರೆ, ಹೊಸ ಆದಾಯ ತೆರಿಗೆ ಕಾಯ್ದೆ 2025 ಮತ್ತು ಆದಾಯ ತೆರಿಗೆ ನಿಯಮಗಳು 2026 ರ ಅಡಿಯಲ್ಲಿ ಸಂಪೂರ್ಣವಾಗಿ ಜಾರಿಗೆ ಬರುತ್ತಿರುವ ಮೊದಲ ಮುಂಗಡ ತೆರಿಗೆ ಪಾವತಿ ಇದಾಗಿದೆ. ನಿಗದಿತ ಗಡುವಿನೊಳಗೆ ಅಗತ್ಯ ಮೊತ್ತವನ್ನು ಪಾವತಿಸದಿದ್ದರೆ, ತೆರಿಗೆ ಕಾಯ್ದೆಯ ನಿಯಮಗಳ ಪ್ರಕಾರ ಬಡ್ಡಿ ಪಾವತಿಸಬೇಕಾಗುತ್ತದೆ.
ಎಟಿಎಂ ವಹಿವಾಟು ಶುಲ್ಕಗಳಲ್ಲಿ ಬದಲಾವಣೆ
ವಿವಿಧ ಬ್ಯಾಂಕುಗಳು ಕೆಲವು ಎಟಿಎಂ ವಹಿವಾಟುಗಳು ಮತ್ತು ಸಂಬಂಧಿತ ಸೇವೆಗಳ ಮೇಲಿನ ಶುಲ್ಕವನ್ನು ಪರಿಷ್ಕರಿಸಿವೆ. ಉಚಿತ ವಹಿವಾಟಿನ ಮಿತಿ ಮೀರಿದ ನಗದು ಹಿಂಪಡೆಯುವಿಕೆ, ಮಿನಿ ಸ್ಟೇಟ್‌ಮೆಂಟ್ ಮತ್ತು ಎಟಿಎಂಗಳಲ್ಲಿ ಬ್ಯಾಲೆನ್ಸ್ ವಿಚಾರಣೆಗೆ ಅನ್ವಯಿಸುವ ಶುಲ್ಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುವುದರಿಂದ, ಗ್ರಾಹಕರು ತಮ್ಮ ತಮ್ಮ ಬ್ಯಾಂಕುಗಳು ಜಾರಿಗೊಳಿಸಿರುವ ಇತ್ತೀಚಿನ ಶುಲ್ಕಗಳ ವಿವರಗಳನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಸ್ಥಿರ
ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY), ಕೆವಿಪಿ (KVP) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ಜುಲೈ-ಸೆಪ್ಟೆಂಬರ್ 2026 ರ ತ್ರೈಮಾಸಿಕದ ಹೊಸ ಬಡ್ಡಿ ದರಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಪ್ರಸ್ತುತ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿಟ್ಟಿದೆ. ಸದ್ಯ ಪಿಪಿಎಫ್ ಯೋಜನೆಗಳಿಗೆ ಶೇ 7.1 ರಷ್ಟು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ 8.2 ರಷ್ಟು ಬಡ್ಡಿ ನೀಡಲಾಗುತ್ತಿದೆ.
ಪ್ಯಾನ್ (PAN) ನಿಯಮಗಳಲ್ಲಿ ಪ್ರಮುಖ ಬದಲಾವಣೆ
ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ:
ನಗದು ಠೇವಣಿ: 50,000 ರೂ.ಗಿಂತ ಹೆಚ್ಚಿನ ಕೆಲವು ಸಾಮಾನ್ಯ ನಗದು ಠೇವಣಿಗಳಿಗೆ ಪ್ಯಾನ್ ಸಂಖ್ಯೆಯನ್ನು ಒದಗಿಸುವುದು ಇನ್ಮುಂದೆ ಕಡ್ಡಾಯವಲ್ಲ.
ಆಸ್ತಿ ವಹಿವಾಟು: ಆಸ್ತಿ ವಹಿವಾಟುಗಳಲ್ಲಿ ಪ್ಯಾನ್ ಕಡ್ಡಾಯದ ಮಿತಿಯನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅಂದರೆ 20 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಪ್ಯಾನ್ ಅಗತ್ಯವಿರುತ್ತದೆ.
ಕಡ್ಡಾಯ ಮಿತಿ: 45 ಲಕ್ಷ ರೂ. ಮೀರಿದ ಆಸ್ತಿ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
ಭಾರಿ ಉಡುಗೊರೆಗಳು: ದೊಡ್ಡ ಮೊತ್ತದ ಅಥವಾ ಭಾರಿ ಉಡುಗೊರೆಗಳನ್ನು (Gifts) ಪಡೆಯುವಾಗಲೂ ಪ್ಯಾನ್ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ. ಈ ತಿಂಗಳಿನಿಂದಲೇ ಈ ಹೊಸ ಪ್ಯಾನ್ ನಿಯಮಗಳು ಜಾರಿಗೆ ಬಂದಿವೆ.








