ಬೆಂಗಳೂರು : ಬೆಂಗಳೂರಿನಲ್ಲಿ ಕೇವಲ ಪಾರಿವಾಳ ಕದ್ದ ವಿಚಾರವಾಗಿ ಗಲಾಟೆ ನಡೆದು ಓರ್ವ ಯುವಕನನ್ನು ಐವರು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂದಿನಿ ಲೇಔಟ್, ಲಗ್ಗೆರೆ ನಿವಾಸಿಗಳಾದ ದರ್ಶನ್(28), ಸುರೇಂದ್ರ(27), ಮಹೇಂದ್ರ(29), ವಿಜಯ್(26) ಹಾಗೂ ದರ್ಶನ್(26) ಬಂಧಿತರು. ಇತರೆ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಎ.21 ರಂದು ರಾತ್ರಿ ರಾಜಗೋಪಾಲನಗರದ ವಿಜ್ಞಾನ ಪಬ್ಲಿಕ್ ಶಾಲೆ ಬಳಿ ಮಲ್ಲಿಕಾರ್ಜನ್ ರಾವ್ (24) ಎಂಬಾತನನ್ನು ಹತ್ಯೆಗೈಯಲಾಗಿತ್ತು.
ಕೊಲೆಯಾದ ಮಲ್ಲಿಕಾರ್ಜನ್ ರಾವ್ ಅವರ ಸ್ನೇಹಿತ ಪ್ರಶಾಂತ್ ಪಾರಿವಾಳ ಸಾಕುತ್ತಿದ್ದ. ಕೆಲ ದಿನಗಳ ಹಿಂದೆ ಆರೋಪಿಗಳು ಆತನ ಪಾರಿವಾಳಗಳನ್ನು ಕಳವು ಮಾಡಿಕೊಂಡಿದ್ದರು. ಈ ವಿಚಾರ ಸಂಬಂಧ ಎ.21ರಂದು ರಾತ್ರಿ ಲಗ್ಗೆರೆ ಬಳಿ ಆರೋಪಿಗಳನ್ನು ಪ್ರಶ್ನಿಸಲು ಪ್ರಶಾಂತ್ ಜೊತೆ ಮಲ್ಲಿಕಾರ್ಜನ್ ರಾವ್ ಕೂಡ ಹೋಗಿದ್ದಾನೆ. ಈ ವೇಳೆ ನಡೆದ ಹೊಡೆದಾಟದಲ್ಲಿ ಆರೋಪಿಗಳು ಮಲ್ಲಿಕಾರ್ಜನ್‌ಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








