ಬೆಳಗಾವಿ : ಆಟವಾಡಬೇಕಿದ್ದ ವಯಸ್ಸಿನಲ್ಲಿ ಪುಟ್ಟ ಬಾಲಕಿಯೊಬ್ಬಳು ವಿದ್ಯುತ್ ಅವಘಡಕ್ಕೆ ಬಲಿಯಾದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಮನೆಯ ಮೇಲ್ಭಾಗದಲ್ಲಿ ಆಟವಾಡುತ್ತಿದ್ದಾಗ ಸ್ಕಿಪ್ಪಿಂಗ್ ಹಗ್ಗ ವಿದ್ಯುತ್ ತಂತಿಗೆ ಸಿಲುಕಿದ ಪರಿಣಾಮ, 9 ವರ್ಷದ ಸಾನ್ವಿ ಕಾಂಬಳೆ ಎಂಬ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಇಂಗಳಿ ಗ್ರಾಮದ ನಿವಾಸಿಯಾದ ಸಾನ್ವಿ, ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಶಾಲೆಯಿಂದ ಮನೆಗೆ ಮರಳಿದ್ದ ಬಾಲಕಿ, ಸಂಜೆ ವೇಳೆ ಮನೆಯ ಮಾಳಿಗೆಯ ಮೇಲೆ ಸ್ಕಿಪ್ಪಿಂಗ್ ಆಟವಾಡುತ್ತಿದ್ದಳು. ಈ ವೇಳೆ ಆಕೆಯ ಕೈಲಿದ್ದ ಸ್ಕಿಪ್ಪಿಂಗ್ ಹಗ್ಗ ಆಕಸ್ಮಿಕವಾಗಿ ಮನೆಯ ಮೇಲ್ಭಾಗದಲ್ಲೇ ಹಾದುಹೋಗಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ.
ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಹಗ್ಗವನ್ನು ಹೇಗಾದರೂ ಮಾಡಿ ಕೆಳಕ್ಕೆ ತೆಗೆಯಬೇಕೆಂದು ಸಾನ್ವಿ ಪ್ರಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಹಗ್ಗದ ಮೂಲಕ ವಿದ್ಯುತ್ ಪ್ರವಹಿಸಿ ಬಾಲಕಿಗೆ ಜೋರಾದ ಆಘಾತ (Electric Shock) ನೀಡಿದೆ. ವಿದ್ಯುತ್ ಸ್ಪರ್ಶದ ರಭಸಕ್ಕೆ ಸಾನ್ವಿ ಮಾಳಿಗೆಯಿಂದ ನೇರವಾಗಿ ಕೆಳಕ್ಕೆ ಬಿದ್ದಿದ್ದಾಳೆ.ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಪೋಷಕರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವಿದ್ಯುತ್ ಶಾಕ್ ಹಾಗೂ ಎತ್ತರದಿಂದ ಬಿದ್ದಿದ್ದರಿಂದ ತೀವ್ರ ಒಳಪೆಟ್ಟುಗಳಾಗಿದ್ದವು. ವೈದ್ಯರು ರಕ್ಷಿಸಲು ಪ್ರಯತ್ನಿಸಿದರೂ ಸಹ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








