ಬೆಳಗಾವಿ : ಖಾಸಗಿ ಕಾರ್ಯಕ್ರಮದಲ್ಲಿ ಶಾಸಕರ ಜೊತೆ ಭಾಗಿ ಆಗಿದ್ದ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಶಾಸಕರ ಆಪ್ತರೊಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಯ ಅಥಣಿ ತಾಲೂಕಿನ ತಂವಶಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅಥಣಿ ತಾಲೂಕು ಹಾಲುಮತ ಕುರುಬ ಸಮಾಜದ ಅಧ್ಯಕ್ಷ, ಜಿ.ಪಂ. ಮಾಜಿ ಸದಸ್ಯ ರಾವಸಾಬ ಬೆವನೂರು (74) ಮೃತರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಹಾಲುಮತ ಸಮಾಜದ ತಾಲೂಕಾ ಅಧ್ಯಕ್ಷ ರಾವಸಾಬ ಬೇವನೂರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯ ಗೃಹ ಪ್ರವೇಶಕ್ಕೆ ಲಕ್ಷ್ಮಣ ಸವದಿ ಮತ್ತು ರಾವಸಾಬ ಬೇವನೂರು ಅವರು ತೆರಳಿದ್ದರು. ಮನೆಯ ಒಳಗಡೆ ಒಟ್ಟಿಗೆ ಫೋಟೋಶೂಟ್ ಮುಗಿಸಿ ಹೊರಗಡೆ ಬರುತ್ತಿದ್ದಂತೆ ಶಾಸಕರ ಆಪ್ತನಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅಲ್ಲಿದ್ದ ಜನರು ರಾವಸಾಬ ಅವರನ್ನು ಬದುಕಿಸಲು ಪ್ರಯತ್ನಪಟ್ಟಿದ್ದಾರೆ. ಆದ್ರೆ, ದುರದೃಷ್ಟವಶಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ತಾಲೂಕಿನ ಶಿವನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಂತ್ಯಕ್ರಿಯೆ ಜರುಗಿತು. ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.








