ನಾಸಿಕ್: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಶಾಖೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಸ್ಥೆಯ ಟೀಮ್ ಲೀಡರ್ ಮತ್ತು ಸಹೋದ್ಯೋಗಿಗಳು ತನ್ನ ಮೇಲೆ ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಿದ್ದಲ್ಲದೆ, ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪುರುಷ ಉದ್ಯೋಗಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಮಗು ಪಡೆಯಲು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಉದ್ಯೋಗಿಗೆ, ಟೀಮ್ ಲೀಡರ್ ಒಬ್ಬರು “ನಿನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸು” ಎಂದು ಅತ್ಯಂತ ಹೀಯಾಳಿಸಿ ಮಾತನಾಡಿದ್ದಾರೆ ಎಂದು ಸಂತ್ರಸ್ತ ಉದ್ಯೋಗಿ ಆರೋಪಿಸಿದ್ದಾರೆ.
2022ರಲ್ಲಿ ಕೆಲಸಕ್ಕೆ ಸೇರಿದಾಗಿನಿಂದಲೂ ತನಗೆ ಕಿರುಕುಳ ನೀಡಲಾಗುತ್ತಿದೆ. ಬಲವಂತವಾಗಿ ಟೋಪಿ (skullcap) ಧರಿಸುವಂತೆ, ಕಲ್ಮಾ ಪಠಿಸುವಂತೆ ಮತ್ತು ನಮಾಜ್ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಅವರು ದೂರಿದ್ದಾರೆ.
ಆರೋಪಿಗಳ ವಿವರ: ಈ ಕೃತ್ಯದಲ್ಲಿ ಟೀಮ್ ಲೀಡರ್ ತೌಸಿಫ್ ಅಖ್ತರ್ ಮತ್ತು ಸಹೋದ್ಯೋಗಿ ದಾನಿಶ್ ಶೇಖ್ ಅವರ ಹೆಸರನ್ನು ಉದ್ಯೋಗಿ ಉಲ್ಲೇಖಿಸಿದ್ದಾರೆ. ತಾನು ಹೇಳಿದಂತೆ ಕೇಳದಿದ್ದರೆ ಅತಿಯಾದ ಕೆಲಸದ ಹೊರೆ ನೀಡಿ ಮಾನಸಿಕವಾಗಿ ಹಿಂಸಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಉದ್ಯೋಗಿಯ ಮೇಲೂ ದೌರ್ಜನ್ಯ
ಇದೇ ಕಚೇರಿಯ 23 ವರ್ಷದ ಮಹಿಳಾ ಉದ್ಯೋಗಿಯೊಬ್ಬರು ಕೂಡ ದೂರು ದಾಖಲಿಸಿದ್ದು, ದಾನಿಶ್ ಶೇಖ್ ಎಂಬಾತ ತನಗೆ ಮದುವೆಯಾಗುವಂತೆ ಒತ್ತಾಯಿಸಿ, ಬಲವಂತವಾಗಿ ಮುತ್ತು ನೀಡಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಹೆಚ್‌ಆರ್ ಎಕ್ಸಿಕ್ಯೂಟಿವ್ ನಿದಾ ಖಾನ್ ಮತ್ತು ಅಖ್ತರ್ ಅವರು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಟೆರೇಸ್ ಮೇಲೆ ಕೆಲಸ ಮಾಡಲು ಶಿಕ್ಷೆ!
ಮತ್ತೊಬ್ಬ ಮಹಿಳಾ ಉದ್ಯೋಗಿ ಮಾಡಿರುವ ಆರೋಪ ಇನ್ನೂ ಭೀಕರವಾಗಿದೆ. ಅವರನ್ನು ಕಚೇರಿಯ ಟೆರೇಸ್ ಮೇಲೆ ಒಬ್ಬರೇ ಕುಳಿತು ಕೆಲಸ ಮಾಡುವಂತೆ ಪೀಡಿಸಲಾಗುತ್ತಿತ್ತು. ಭದ್ರತೆಯ ನೆಪದಲ್ಲಿ ಅವರ ಮೊಬೈಲ್ ಮತ್ತು ಬ್ಯಾಗ್ ಕಿತ್ತುಕೊಳ್ಳಲಾಗುತ್ತಿತ್ತು. 20 ರಿಂದ 25 ವರ್ಷದ ಯುವತಿಯರನ್ನೇ ಗುರಿಯಾಗಿಸಿಕೊಂಡು ಈ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.







