ಜಗಳೂರು: ಮದುವೆಯ ಆಮಿಷವೊಡ್ಡಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾಗಿ ಹೆರಿಗೆಯಾಗುವವರೆಗೂ ಇಡೀ ಕೃತ್ಯವನ್ನು ಮುಚ್ಚಿಟ್ಟಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬನ ಅಮಾನವೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ.ಚೋಗಳೇರಿ ಹಟ್ಟಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮಂಜಣ್ಣ (30) ಬಂಧಿತ ಆರೋಪಿ.
ಕೆಲವು ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಯು ತೀವ್ರ ಕೈ-ಕಾಲು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಆದರೆ, ತೀವ್ರ ಮೂಢನಂಬಿಕೆಗೆ ಒಳಗಾಗಿದ್ದ ಆಕೆಯ ಪೋಷಕರು, ಮಗಳಿಗೆ ದೆವ್ವ ಅಥವಾ ಭೂತದ ಗಾಳಿ ಸೋಕಿದೆ ಎಂದು ಭಾವಿಸಿದ್ದರು.ಬಳಿಕ ದೇವಸ್ಥಾನದವರ ಸೂಚನೆಯಂತೆ ಪೋಷಕರು ಬಾಲಕಿಯನ್ನು ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪೊಲೀಸರು ಆರೋಪಿ ಮಂಜಣ್ಣನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








