ಶಿವಮೊಗ್ಗ : ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು 2023ರ ಮಾರ್ಚ್ ಮಾಸಾಂತ್ಯದೊಳಗಾಗಿ ತ್ವರಿತಗತಿಯಲ್ಲಿ ವೈಜ್ಞಾನಿಕವಾಗಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಪರಿಸರ ಅಭಿಯಂತರರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆಯ ವಾಹನ, ಯಂತ್ರೋಪಕರಣ ಮತ್ತು ಮಾನವ ಸಂಪನ್ಮೂಲಗಳ ಸಂಗ್ರಹಣೆಯ ಪ್ರಸ್ತಾವನೆಗಳಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಮಂಜೂರಾತಿ ನೀಡುವ ಕುರಿತು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈಗಾಗಲೇ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಅವಶ್ಯಕತೆಗನುಗುಣವಾಗಿ ಯಂತ್ರೋಪಕರಣಗಳನ್ನು ಖರೀದಿಸಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ಕೆಲವು ಕಡೆ ಘಟಕ ಮತ್ತು ಯಂತ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಘಟಕಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಘನತ್ಯಾಜ್ಯ ಸಂಸ್ಕರಣಾ ಯಂತ್ರಗಳನ್ನು ಬಳಸಿಕೊಂಡು ಪ್ರತಿನಿತ್ಯ ಸಂಗ್ರಹವಾಗುತ್ತಿರುವ ತ್ಯಾಜ್ಯದೊಂದಿಗೆ ಈ ಹಿಂದೆ ಬಹುದಿನಗಳಿಂದ ಸಂಗ್ರಹವಾಗಿರುವ ಕಸವನ್ನು ವಿದ್ಯುತ್, ಸಿಬ್ಬಂಧಿಗಳ ಕೊರತೆ ಇತ್ಯಾದಿ ನೆಪ ಹೇಳದೆ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಆಯಾ ಸ್ಥಳೀಯ ಸಂಸ್ಥೆಗಳಲ್ಲಿನ ಮುಖ್ಯಾಧಿಕಾರಿಗಳು ವಾರಕ್ಕೆರೆಡು ಬಾರಿ ಘನತ್ಯಾಜ್ಯ ಘಟಕಗಳಿಗೆ ಖುದ್ದು ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ ಅವರು, ನಿರ್ಲಕ್ಷö್ಯ ವಹಿಸುವ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಈಗಾಗಲೇ ಯಂತ್ರಗಳನ್ನು ಖರೀದಿಸಿರುವ ಸಂಸ್ಥೆಗಳ ಮುಖ್ಯಸ್ಥರು ಕೂಡಲೇ ಯಂತ್ರಗಳನ್ನು ಸ್ಥಾಪಿಸಿ, ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದರು.
BIGG NEWS: ಲವ್ ಜಿಹಾದ್ ಆರೋಪ; ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಅರೆಸ್ಟ್
ಶಿವಮೊಗ್ಗ ಸೇರಿದಂತೆ ಗ್ರಾಮ ಪಂಚಾಯಿತಿಯಿಂದ ಉನ್ನತೀಕರಣಗೊಂಡ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ ಅವರು, ಉಳಿದ ತಾಲೂಕುಗಳ ಕಾರ್ಯಕ್ಷಮತೆಯನ್ನು ವೀಕ್ಷಿಸಿ, ಸಕಾಲಿಕ ಸಲಹೆ-ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದರು.
ಜಿಲ್ಲೆಯಾದ್ಯಂತ ಕಸ ಸಂಗ್ರಹಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅದರ ಸಮರ್ಪಕ ನಿರ್ವಹಣೆ ಕಾರ್ಯದಲ್ಲಿ ನಿರೀಕ್ಷಿತ ತೃಪ್ತಿ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇತ್ತೀಚಿನ ಕೆಲವು ವರ್ಷಗಳಿಂದ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ನಾಯಿ ಹಂದಿಗಳ ಜೊತೆಗೆ ಹೊಸ ಸಮಸ್ಯೆ ಸೇರಿಕೊಂಡಂತಾಗಿದೆ. ಈ ಬಗ್ಗೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಈ ಬಿಡಾಡಿ ಪ್ರಾಣಿಗಳ ವ್ಯವಸ್ಥಿತ ನಿಯಂತ್ರಣದ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಕಸ ಸಂಗ್ರಹಕ್ಕಾಗಿ ನಿಯೋಜಿತವಾಗಿರುವ ಸಿಬ್ಬಂಧಿಗಳು ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಆದ್ದರಿಂದ ಈ ಕಸವನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸುವ ಮುನ್ನವೇ ಒಣಕಸ ಮತ್ತು ಹಸಿಕಸ ಬೇರ್ಪಡಿಸಿ ಸಂಗ್ರಹಿಸುವ ಹಾಗೂ ಸಂಗ್ರಹಿಸಿದ ಕಸವನ್ನು ಮಿಶ್ರಣ ಮಾಡಿಕೊಳ್ಳದೆ ನಿಗಧಿಪಡಿಸಿದ ಸ್ಥಳದಲ್ಲಿ ಸಂಗ್ರಹಿಸಲು ಅಗತ್ಯವಿರುವ ತರಬೇತಿ ಅಥವಾ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಿರಾಳಕೊಪ್ಪ, ಸೊರಬ ಮತ್ತಿತರ ಸ್ಥಳಗಳಲ್ಲಿ ಒಣಕಸ ಸಂಗ್ರಹಕ್ಕಾಗಿ ಹಾಗೂ ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ಇ-ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತ್ಯೇಕವಾಗಿರುವ ಕೊಠಡಿಗಳನ್ನು ಸ್ಥಾಪಿಸುವಂತೆ ಸೂಚಿಸಿದ ಅವರು, ಪ್ರಾಧಿಕರಣವೂ ಸೂಚಿಸಿರುವಂತೆ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಕಾಲಿಕವಾಗಿ ಸಭೆ ಕರೆದು ಸಮಾಲೋಚನೆ ನಡೆಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ಕುಮಾರ್, ಪರಿಸರಾಸಕ್ತ ಮಹದೇವಸ್ವಾಮಿ, ಜಿಲ್ಲಾ ಯೋಜನಾ ನಿರ್ದೇಶಕ ಎಂ.ಕರಭೀಮಣ್ಣನವರ್, ಶ್ರೀಮತಿ ವಹೀದಾಬೇಗಂ, ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಶ್ರೀಮತಿ ಶಿಲ್ಪಾ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಸರ ಅಭಿಯಂತರರು ಹಾಗೂ ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.